
ಕಾರ್ಕಳ: ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಹಾಗೂ ನವೀನ ಬೋಧನಾ ವಿಧಾನಗಳ ಮೂಲಕ ಗುರುತಿಸಿಕೊಂಡಿರುವ ಕಾರ್ಕಳದ ಜೇಸಿ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಶಾಲೆಯ ಶಿಕ್ಷಕಿ ಶ್ರೀಮತಿ ವಂದನಾ ರೈ ಅವರು ಮಹತ್ವದ ಗೌರವಕ್ಕೆ ಪಾತ್ರರಾಗಿದ್ದಾರೆ.
ನೃತ್ಯ ಕಲೆಯನ್ನು ಬೋಧನಾ ಚಟುವಟಿಕೆಗಳೊಂದಿಗೆ ಸಮನ್ವಯಗೊಳಿಸಿ, ವಿದ್ಯಾರ್ಥಿಗಳಿಗೆ ಆಸಕ್ತಿದಾಯಕ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಪಾಠ ಬೋಧಿಸುವ ಅವರ ವಿಶಿಷ್ಟ ಪ್ರಯೋಗಕ್ಕೆ ವಿಶೇಷ ಮನ್ನಣೆ ದೊರೆತಿದೆ.
ಈ ಸಾಧನೆಯ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB), ಬೆಂಗಳೂರು ಪ್ರಾದೇಶಿಕ ಕಚೇರಿಯಿಂದ ವಂದನಾ ರೈ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ನೃತ್ಯದ ಮೂಲಕ ಶಿಕ್ಷಣವನ್ನು ಹೆಚ್ಚು ಸೃಜನಶೀಲ, ಮನರಂಜನಾತ್ಮಕ ಹಾಗೂ ಅರ್ಥಪೂರ್ಣವಾಗಿಸುವ ಅವರ ಪ್ರಯತ್ನ ಶಿಕ್ಷಕ ವೃಂದಕ್ಕೆ ಮಾದರಿಯಾಗಿದೆ. ಪಠ್ಯ ಶಿಕ್ಷಣದ ಜೊತೆಗೆ ಕಲೆಯನ್ನೂ ಬೆಸೆಯುವ ಮೂಲಕ ಮಕ್ಕಳಲ್ಲಿನ ಸೃಜನಶೀಲತೆ ಮತ್ತು ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ಅವರ ಕಾರ್ಯ ಶ್ಲಾಘನೀಯವಾಗಿದೆ.
ಕಾರ್ಕಳದ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿರುವ ವಂದನಾ ರೈ ಅವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.






















































































