
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಮಂಗಳೂರು ನಡುವಿನ ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಮುನ್ನೆಚ್ಚರಿಕೆ ಸೂಚನೆ ನೀಡಿದೆ.
ಸೆ.27ರ ಬೆಳಗ್ಗೆ 5.30ರಿಂದ ಸೆ.29ರ ರಾತ್ರಿ 11.30ರವರೆಗೆ ಸಮುದ್ರದಲ್ಲಿ 0.8ರಿಂದ 1.1 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಅಲೆಗಳ ಅವಧಿ 16ರಿಂದ 18 ಸೆಕೆಂಡುಗಳವರೆಗೆ ಇರಲಿದೆ ಎಂದು INCOIS ತಿಳಿಸಿದೆ.
ಈ ಅವಧಿಯಲ್ಲಿ ಸಮುದ್ರದ ನೀರು ದಿಢೀರ್ ದಡಕ್ಕೆ ನುಗ್ಗುವ ಸಾಧ್ಯತೆ ಇರುವುದರಿಂದ ಕಡಲತೀರದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ದೋಣಿ ಚಾಲಕರು ಜಾಗರೂಕತೆಯಿಂದ ಸಂಚರಿಸಬೇಕು. ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕಿಳಿಯದೆ ಮುನ್ನೆಚ್ಚರಿಕೆ ವಹಿಸುವಂತೆ ಆಡಳಿತ ಮಂಡಳಿ ತಿಳಿಸಿದೆ.































































































































