
ಕಾಪು: ಕಾಪು ಫ್ಲೈಓವರ್ ಬಳಿ ಶನಿವಾರ ಆಟೋ ರಿಕ್ಷಾ ಮತ್ತು ಟೆಂಪೋ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
ಉಚ್ಚಿಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾಗೆ ರಸ್ತೆಬದಿಯ ಬ್ಯಾನರ್ ತೆರವುಗೊಳಿಸಲು ಬಳಸುತ್ತಿದ್ದ ಕಾಪು ಪುರಸಭೆಯ ಟೆಂಪೋ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಆಟೋದಲ್ಲಿದ್ದ ಉಚ್ಚಿಲ ನಿವಾಸಿ ಸಂಧ್ಯಾ ಹಾಗೂ ಅವರ ಮಕ್ಕಳಾದ ಗಾಯನ್ ಮತ್ತು ಸುವಿತ್ ಗಾಯಗೊಂಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಸುವಿತ್ ಉಡುಪಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



































