
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಶಾಸಕರ ನಡುವಿನ ಭಿನ್ನಮತ ಮತ್ತಷ್ಟು ತೀವ್ರವಾಗುತ್ತಿದೆ. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ನಡುವೆ ಸದನದಲ್ಲೇ ವಾಗ್ವಾದ ನಡೆದ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಚಿವ ಎಂ.ಸಿ. ಸುಧಾಕರ್ ಬಣದ ನಡುವಿನ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಒತ್ತಾಯಿಸಿದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ ಯಾವುದೇ ಜಾತಿ ಸಂಘರ್ಷವಿಲ್ಲ. ಎಲ್ಲ ಸಮುದಾಯದವರು ಸಾಮರಸ್ಯದಿಂದ ಬದುಕುತ್ತಿದ್ದು, ಪ್ರದೀಪ್ ಈಶ್ವರ್ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರದೀಪ್ ಈಶ್ವರ್ ಅವರು ಎಂ.ಸಿ. ಸುಧಾಕರ್ ಅವರ ನೆರವನ್ನು ಮರೆತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಶಿಕ್ಷಣ ಸಂಸ್ಥೆ ಸ್ಥಾಪನೆಯಿಂದ ಹಿಡಿದು ಶಾಸಕರಾಗುವವರೆಗೂ ಸುಧಾಕರ್ ಬೆಂಬಲ ನೀಡಿದ್ದರು. ಆದರೆ ಇದೀಗ ಅವರ ವಿರುದ್ಧವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರದೀಪ್ ಈಶ್ವರ್ ಸವಾಲು ಹಾಕುತ್ತಿದ್ದಾರೆ ಎಂದು ಸುಧಾಕರ್ ಬೆಂಬಲಿಗರು ಕಿಡಿಕಾರಿದ್ದಾರೆ.
ಇದರ ಬೆನ್ನಲ್ಲೇ ಪ್ರದೀಪ್ ಈಶ್ವರ್ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಬೇಕು ಹಾಗೂ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಸುಧಾಕರ್ ಬೆಂಬಲಿಗರು ಆಗ್ರಹಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಕೆಪಿಸಿಸಿಗೂ ಮನವಿ ಸಲ್ಲಿಸಿದ್ದಾರೆ.
ಇದೇ ವೇಳೆ, ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರದೀಪ್ ಈಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಹಾಗೂ ಅವರ ಕಾರ್ಯವೈಖರಿಗೆ ಸುಧಾಕರ್ ಬಣ ತೀವ್ರ ವಿರೋಧ ವ್ಯಕ್ತಪಡಿಸಿದೆ.






















