
ಬಜಗೋಳಿ: ಬಜಗೋಳಿ ಜೈನ್ ಮಿಲನ್ ಹಾಗೂ ಯುವ ಜೈನ್ ಮಿಲನ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಆಟಿದ ಕೂಟ ಸಮಾರಂಭವು ಆಗಸ್ಟ್ 15, 2026ರಂದು ಅಪ್ಪಾಯಿ ಬಸದಿ ಆವರಣದಲ್ಲಿ ಸಂಭ್ರಮದಿಂದ ನಡೆಯಿತು.
ಬಸದಿ ಆಡಳಿತ ಮೊಕ್ತೇಸರರಾದ ಜಯವರ್ಮ ಹೆಗ್ಡೆಯವರು ಜ್ಯೋತಿ ಬೆಳಗಿಸಿ, ಚೆನ್ನೆ ಮಣೆಗೆ ಕಾಯಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗೇರುಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕರೂ, ನಿರೂಪಣಾ ರತ್ನ ಪ್ರಶಸ್ತಿ ಪುರಸ್ಕೃತರೂ ಆದ ಅಜಿತ್ ಕೊಕ್ರಾಡಿಯವರು ಆಟಿದ ಕೂಟದ ಮಹತ್ವ ಹಾಗೂ ವೈಶಿಷ್ಟ್ಯಗಳ ಕುರಿತು ಮಾತನಾಡಿದರು. ಜೈನ ಧರ್ಮದ ಅಹಿಂಸಾ ತತ್ವವು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಪ್ರೇರಣೆಯ ಕುರಿತು ಬೆಳಕು ಚೆಲ್ಲಿದ ಅವರು, ಪ್ರಥಮ ಮಹಿಳಾ ಹೋರಾಟಗಾರ್ತಿಯರಾದ ವೀರ ರಾಣಿ ಅಬ್ಬಕ್ಕ ಹಾಗೂ ರಾಣಿ ಚೆನ್ನಭೈರಾದೇವಿಯವರ ಶೌರ್ಯ, ಸಾಹಸ ಮತ್ತು ಸಾಧನೆಗಳು ಇಂದಿನ ಪೀಳಿಗೆಗೆ ಇನ್ನಷ್ಟು ಪರಿಚಿತವಾಗಬೇಕೆಂದು ಅಭಿಪ್ರಾಯಪಟ್ಟರು.
ಭಾರತೀಯ ಜೈನ್ ಮಿಲನ್ ವಲಯ–8, ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿ ಶಶಿಕಲಾ ಹೆಗ್ಡೆ ಅವರು ಪ್ರಧಾನ ಅತಿಥಿಗಳಾಗಿ ಭಾಗವಹಿಸಿ, ಬಜಗೋಳಿ ಜೈನ್ ಮಿಲನ್ ,ವಲಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿರುವುದಕ್ಕೆ, ರಾಜ್ಯಮಟ್ಟದ ಜಿನ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಹಾಗೂ ವಿವಿಧ ಸಮಾಜಮುಖಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಜೈನ್ ಮಿಲನ್ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಪುಚ್ಚಬೆಟ್ಟು ವೀರ್ ಶೈಲೇಶ್ ಅವರಿಗೆ ‘ಸಾಧನಶೀಲ ಯುವ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯ ನಿರ್ವಹಣೆ ಹಾಗೂ ಪ್ರಾಯೋಜಕತ್ವವನ್ನು ಜೈನ್ ಮಿಲನ್ ಮಂಗಳೂರು ವಲಯದ ನಿಕಟಪೂರ್ವ ಅಧ್ಯಕ್ಷರಾದ ಶ್ರೀವರ್ಮ ಅಜ್ರಿ ವಹಿಸಿದ್ದರು.
ವೀತರಾಗ ಧಾರ್ಮಿಕ ಪಾಠಶಾಲೆಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ಹಾಗೂ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಈ ಕಾರ್ಯಕ್ರಮವನ್ನು ಭರತ್ ರಾಜ್ ನಿರ್ವಹಿಸಿದರು. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ಹಾಗೂ ಶಾಶ್ವತ ಫಲಕ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ವಿರಾಜ್ ಜೈನ್ ನಿರ್ವಹಿಸಿದರು. ಶಾಶ್ವತ ಫಲಕದ ಪ್ರಾಯೋಜಕತ್ವವನ್ನು ಕ್ರಿಯೇಟಿವ್ ಡೆಕೋರೇಟರ್ಸ್ ನೆಲ್ಲಿಕಾರು ಇವರು ವಹಿಸಿದ್ದರು.
ಆಟಿದ ಕೂಟದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸಾಂಪ್ರದಾಯಿಕ ಕ್ರೀಡಾ ಸ್ಪರ್ಧೆಗಳು ಹಾಗೂ ಸ್ವಾತಂತ್ರ್ಯ ಹೋರಾಟದ ಬಗೆಗಿನ ರಸಪ್ರಶ್ನೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಯುವ ಜೈನ್ ಮಿಲನ್ನ ಅಧ್ಯಕ್ಷರಾದ ಪ್ರಧಾನ್ ಜೈನ್ ಹಾಗೂ ಕ್ರೀಡಾ ಕಾರ್ಯದರ್ಶಿಗಳಾದ ನಿತೀಕ್ಷಾ ಜೈನ್ ಮತ್ತು ವೃದ್ಧಿ ಜೈನ್ ಅವರು ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ವೀರ್ ವರ್ಧಮಾನ್ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾತಂತ್ರ್ಯೋತ್ಸವದ ಮಹತ್ವ ಹಾಗೂ ದೇಶದ ಏಕತೆ, ಸೌಹಾರ್ದತೆ ಮತ್ತು ಜವಾಬ್ದಾರಿಯುತ ನಾಗರಿಕತ್ವದ ಕುರಿತು ಸಂದೇಶ ನೀಡಿದರು.
ಕಾರ್ಯಕ್ರಮವು ಸಾಮೂಹಿಕ ಪಂಚಣಮೋಕಾರ ಮಂತ್ರ ಪಠಣದೊಂದಿಗೆ ಆರಂಭವಾಯಿತು. ಅಬ್ಧಿ ಜೈನ್ ಹಾಗೂ ಅಕ್ಷರ ಜೈನ್ ಪ್ರಾರ್ಥನೆಗೈದರು.ಮಿಲನ್. ಕಾರ್ಯದರ್ಶಿ ಓಂಪ್ರಕಾಶ್ ಸ್ವಾಗತಿಸಿದರು.ಯುವ ಜೈನ್ ಮಿಲನ್ ಕಾರ್ಯದರ್ಶಿ ಜುಲೈ ತಿಂಗಳ ವರದಿ ವಾಚಿಸಿದರು. ಶ್ರೇಯಾಂಶ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಪ್ರಮೋದ್ ಜೈನ್ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
ಆಟಿ ತಿಂಗಳ ವಿಶೇಷತೆಯನ್ನು ಸಾರುವ ವಿವಿಧ ಬಗೆಯ ಸಾಂಪ್ರದಾಯಿಕ ಆಟಿ ತಿಂಡಿ-ತಿನಿಸುಗಳನ್ನು ಎಲ್ಲರಿಗೂ ಉಪಾಹಾರವಾಗಿ ವಿತರಿಸಲಾಯಿತು. ಸಂಪ್ರದಾಯ, ಸಂಸ್ಕೃತಿ, ಕ್ರೀಡೆ ಹಾಗೂ ಸಾಧನೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.













































































































