
ನವದೆಹಲಿ: ದೀಪಾವಳಿ ವೇಳೆ ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ನಿಷೇಧ ಹೇರುವ ಬದಲು, ನಿಯಂತ್ರಿತವಾಗಿ ಬಳಸಲು ಅವಕಾಶ ನೀಡುವ ನಿಲುವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ. ದಿನವಿಡೀ ಪಟಾಕಿ ಸಿಡಿಸಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪಟಾಕಿಗೆ ಸಂಪೂರ್ಣ ನಿಷೇಧ ಹೇರಿದರೆ ಹಬ್ಬ ಆಚರಿಸುವವರ ಭಾವನೆಗೆ ಧಕ್ಕೆಯಾಗಬಹುದು. ಆದರೆ, ಅನಿಯಂತ್ರಿತವಾಗಿ ಪಟಾಕಿ ಸಿಡಿಸಿದರೆ ಮಕ್ಕಳು, ಹಿರಿಯರು ಹಾಗೂ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಪಟಾಕಿ ಸಿಡಿಸಲು ನಿರ್ದಿಷ್ಟ ಸಮಯ ನಿಗದಿಪಡಿಸುವ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.
ದೀಪಾವಳಿ ಸಮಯದಲ್ಲಿ ಕೃಷಿ ತ್ಯಾಜ್ಯ ಸುಡುವುದರಿಂದ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತದೆ ಎಂಬ ವಿಷಯವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ವಿಚಾರಣೆ ವೇಳೆ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠ, ಮಾಲಿನ್ಯ ನಿಯಂತ್ರಣದ ಜೊತೆಗೆ ಹಬ್ಬ ಆಚರಣೆಗೆ ಅವಕಾಶ ಕಲ್ಪಿಸುವ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿತು. ನಿರ್ದಿಷ್ಟ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡುವ ಸಾಧ್ಯತೆಯನ್ನೂ ಸೂಚಿಸಿತು.
ಬೇರಿಯಂ ಆಧಾರಿತ ಪಟಾಕಿಗಳ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿಕ್ರಿಯೆ ಸಲ್ಲಿಸಲು ಐಶ್ವರ್ಯ ಭಾಟಿ ಅಕ್ಟೋಬರ್ 15ರವರೆಗೆ ಕಾಲಾವಕಾಶ ಕೋರಿದರು. ಈ ಪಟಾಕಿಗಳ ಹೊರಾಂಗಣ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಕೋರ್ಟ್ ಸಮಯಾವಕಾಶ ನೀಡಿತು.
ದೆಹಲಿ ಹಾಗೂ ಇತರ ರಾಜ್ಯಗಳಲ್ಲಿ ಅಕ್ಟೋಬರ್‌ನಿಂದ ಜನವರಿವರೆಗೆ ಮಾಲಿನ್ಯ ಹೆಚ್ಚಾಗುವ ಹಿನ್ನೆಲೆಯಲ್ಲಿ ಪಟಾಕಿ ಬಳಕೆಗೆ ಸುಪ್ರೀಂ ಕೋರ್ಟ್ ಹಲವು ವರ್ಷಗಳಿಂದ ನಿರ್ಬಂಧಗಳನ್ನು ವಿಧಿಸುತ್ತ ಬಂದಿದೆ. 2025ರಲ್ಲಿ ದೆಹಲಿ-ರಾಷ್ಟ್ರ ರಾಜಧಾನಿ ವಲಯದಲ್ಲಿ ದೀಪಾವಳಿ ದಿನ ಹಸಿರು ಪಟಾಕಿ ಬಳಕೆಗೆ ಕೆಲವು ಷರತ್ತುಗಳೊಂದಿಗೆ ಅವಕಾಶ ನೀಡಲಾಗಿತ್ತು.
‘ಸೀಮಿತ, ಶರತ್ತುಬದ್ಧ ಅನುಮತಿ’
ನಿಷೇಧಿತ ರಾಸಾಯನಿಕಗಳನ್ನು ಬಳಸದ ಹಾಗೂ ಪರವಾನಗಿ ಪಡೆದ ತಯಾರಕರು ತಯಾರಿಸಿದ ಪಟಾಕಿಗಳಿಗೆ ಮಾತ್ರ ಅವಕಾಶ ನೀಡಬಹುದು ಎಂದು ಐಶ್ವರ್ಯ ಭಾಟಿ ತಿಳಿಸಿದರು. ಶಬ್ದ, ಹೊಗೆ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸುವ ಪಟಾಕಿಗಳಿಗೆ ಸೀಮಿತ ಅನುಮತಿ ನೀಡುವಂತೆ ಸಿಎಸ್‌ಐಆರ್-ಎನ್‌ಇಇಆರ್‌ಐ ಶಿಫಾರಸಿನ ಬಗ್ಗೆಯೂ ಅವರು ನ್ಯಾಯಪೀಠದ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಲಹೆಗಳನ್ನು ಸ್ವೀಕರಿಸಲು ತಾವು ಮುಕ್ತವಾಗಿರುವುದಾಗಿ ತಿಳಿಸಿತು.
ಸಿಎಸ್‌ಐಆರ್-ಎನ್‌ಇಇಆರ್‌ಐ ಸಹಯೋಗದಲ್ಲಿ ಕಡಿಮೆ ಬೇರಿಯಂ ಲವಣ ಬಳಸಿ ಮುಂದಿನ ಪೀಳಿಗೆಯ ಹಸಿರು ಪಟಾಕಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವು ಕಡಿಮೆ ಪ್ರಮಾಣದ ಹೊಗೆ ಹೊರಸೂಸುವಂತೆ ವಿನ್ಯಾಸಗೊಳಿಸಲಾಗಿದೆ.


















