
ಬೆಂಗಳೂರು: ಮಹಿಳೆಯ ದೇಹದ ಆಕಾರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಅಥವಾ ದೈಹಿಕ ರೂಪವನ್ನು ಟೀಕಿಸುವುದು ಮಾತ್ರದಿಂದಲೇ ಐಪಿಸಿ ಸೆಕ್ಷನ್ 509ರಡಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರು ಇಬ್ಬರು ಮಹಿಳೆಯರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವ ವೇಳೆ ಈ ತೀರ್ಪು ನೀಡಿದ್ದಾರೆ.
2023ರ ಆಗಸ್ಟ್‌ನಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿ, ಅರ್ಜಿದಾರರು ಹಾಗೂ ಓರ್ವ ಪುರುಷ ತನ್ನನ್ನು ಮತ್ತು ಸ್ನೇಹಿತರನ್ನು ದಪ್ಪಗಿದ್ದಾರೆಂದು ಹೀಯಾಳಿಸಿ, ದೇಹದ ಆಕಾರದ ಬಗ್ಗೆ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಇಬ್ಬರು ಮಹಿಳೆಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ಪ್ರಕರಣದ ಮೂರನೇ ಆರೋಪಿಯ ವಿರುದ್ಧದ ವಿಚಾರಣೆಯನ್ನು ಈ ಹಿಂದೆ ನ್ಯಾಯಾಲಯ ರದ್ದುಗೊಳಿಸಿತ್ತು. ವಿಚಾರಣೆ ವೇಳೆ ದೂರುದಾರೆಯ ಪರವಾಗಿ ಯಾರೂ ಹಾಜರಾಗಿರಲಿಲ್ಲ.
ದೂರು, ಎಫ್‌ಐಆರ್ ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಐಪಿಸಿ ಸೆಕ್ಷನ್ 509ರಡಿ ಅಪರಾಧ ಸಾಬೀತುಪಡಿಸಲು ಅಗತ್ಯವಾದ ಅಂಶಗಳು ದಾಖಲೆಗಳಲ್ಲಿ ಕಂಡುಬಂದಿಲ್ಲ ಎಂದು ತಿಳಿಸಿತು.
ಮಹಿಳೆಯ ದೇಹದ ಆಕಾರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂಬ ಕಾರಣವೊಂದರಿಂದಲೇ ಸೆಕ್ಷನ್ 509ರಡಿ ಶಿಕ್ಷಾರ್ಹ ಅಪರಾಧ ನಡೆದಿದೆ ಎಂದು ನಿರ್ಧರಿಸಲಾಗದು ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.






















