
ಮೈಸೂರು: ದಸರಾ ಮಹೋತ್ಸವದ ಧಾರ್ಮಿಕ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ಕೆಲವು ದಿನ ಹಾಗೂ ಸಮಯಗಳಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಅ.5ರಂದು ರತ್ನ ಸಿಂಹಾಸನ ಜೋಡಣೆ ನಡೆಯಲಿರುವುದರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅರಮನೆ ಪ್ರವೇಶ ಇರುವುದಿಲ್ಲ. ಅ.11ರಂದು ಖಾಸಗಿ ದರ್ಬಾರ್ ಪೂಜೆ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
ಅ.20ರಂದು ಆಯುಧ ಪೂಜೆ ಹಾಗೂ ಅ.21ರಂದು ವಿಜಯದಶಮಿ ಅಂಗವಾಗಿ ಇಡೀ ದಿನ ಅರಮನೆ ಸಾರ್ವಜನಿಕ ಪ್ರವೇಶದಿಂದ ಬಂದ್ ಆಗಿರಲಿದೆ. ಅ.21ರಂದು ದಸರಾ ಪಾಸ್ ಹಾಗೂ ಜಂಬೂಸವಾರಿ ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಇನ್ನು ರತ್ನ ಸಿಂಹಾಸನ ವಿಸರ್ಜನೆ ಹಾಗೂ ಭದ್ರತಾ ಕೊರಿಡಾರ್ ಸ್ಥಳಾಂತರದ ಹಿನ್ನೆಲೆಯಲ್ಲಿ ನ.19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗುತ್ತದೆ.
ದಸರಾ ಹಿನ್ನೆಲೆಯಲ್ಲಿ ರಾಜಮನೆತನದವರು ಅರಮನೆಯಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿರುವ ಕಾರಣ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.






















