
ಕಾರ್ಕಳ: ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಶಿಕ್ಷಕರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಲೇಖಕಿ ಸಾವಿತ್ರಿ ಮನೋಹರ್ ಮಾತನಾಡಿ, ಹೂವಿನ ಜೊತೆ ಮುಳ್ಳುಗಳಿರುವಂತೆ ಶಿಕ್ಷಕರ ಜೀವನದಲ್ಲಿಯೂ ಸವಾಲುಗಳಿವೆ. ಇಂದಿನ ದಿನಮಾನಗಳಲ್ಲಿ ಬದುಕಿನ ಆಗುಹೋಗುಗಳು ಹಾಗೂ ತೊಂದರೆಗಳನ್ನು ಮೆಟ್ಟಿ ಸಾಗಬೇಕಾದ ಅಗತ್ಯವಿದೆ. ನನ್ನ ಶಿಕ್ಷಕರೆಲ್ಲರೂ ನನಗೆ ಪ್ರೇರಣೆಯಾಗಿದ್ದರಿಂದಲೇ ನನಗೂ ಶಿಕ್ಷಕಿಯಾಗಲು ಸಾಧ್ಯವಾಯಿತು. ಭಾಷೆಯ ಸದ್ಬಳಕೆಯನ್ನು ಶಿಕ್ಷಕರು ಮಾಡಬೇಕಾದ ಅಗತ್ಯವಿದೆ. ಎಲ್ಲ ಪ್ರತಿಭೆಗಳೂ ಒಬ್ಬ ಶಿಕ್ಷಕರಲ್ಲಿಯೇ ಇರಲು ಸಾಧ್ಯವಿಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಬೆಳೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.
ಶಿಕ್ಷಕರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನವೂ ಸಾಧನೆಯ ಹಾದಿಯಾಗಬೇಕಿದೆ. ಈ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಭಿನ್ನ ಭಿನ್ನ ಪರಿಸರದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಶಿಕ್ಷಕರು ಮಾಡುವುದರಿಂದ ಅವರ ಜವಾಬ್ದಾರಿ ಹೆಚ್ಚಿರುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ್ ಎಸ್.ಸಿ. ಮಾತನಾಡಿ, ಗುರು-ಶಿಷ್ಯರ ಪರಂಪರೆ ತುಂಬಾ ಪ್ರಾಚೀನವಾದುದು. ಶಿಷ್ಯರನ್ನು ತಿದ್ದಿ ತೀಡಿ ಬೆಳೆಸುವ ಮೂಲಕ ಗುರುವಿನ ಘನತೆ ಹೆಚ್ಚುತ್ತದೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸದಾ ಪ್ರೋತ್ಸಾಹಕರಾಗಿದ್ದರು. ಜೀವನದಲ್ಲಿ ಮೌಲ್ಯಗಳು ಬೇಕೇ ಬೇಕು. ಮೌಲ್ಯವಿಲ್ಲದ ಬದುಕು ಅರ್ಥಹೀನ ಎಂದು ಅವರು ಹೇಳಿದ್ದಾರೆ. ಶಿಕ್ಷಕರು ಜವಾಬ್ದಾರಿ ಮತ್ತು ಶಿಸ್ತಿನ ಮೂಲಕ ಗೌರವಯುತ ಬಾಳ್ವೆಯನ್ನು ಮಾಡಿಕೊಂಡು ಬಂದವರು. ಸಮಾಜಕ್ಕೆ ಶಿಕ್ಷಕರು ಸದಾ ಅನಿವಾರ್ಯವಾಗಿಯೇ ಇರುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಶಿಕ್ಷಕ ವೃತ್ತಿಯೇ ಬೇರೆ, ಗುರು ಪರಂಪರೆಯೇ ಬೇರೆ. ಗುರು ಪರಂಪರೆಯಲ್ಲಿ ‘ನಾನು’ ಎನ್ನುವ ಅಹಂ ಇಲ್ಲವಾಗುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ಮತ್ತು ಶಿಕ್ಷಣದ ಮಟ್ಟ ಮುಂದಿರುವ ದೇಶ ಸದಾ ಮುಂದಿರುತ್ತದೆ ಎಂದಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತ ನಮ್ಮ ದೇಶ ಗುರು ಪರಂಪರೆಯನ್ನು ಪೋಷಿಸಿ ಬೆಳೆಸಿದ ದೇಶವಾಗಿದೆ ಎಂದರು.
ಶಿಕ್ಷಕರಲ್ಲಿ ಸ್ಥಿತಪ್ರಜ್ಞೆ ಇರಬೇಕು. ಶಿಕ್ಷಣ ವ್ಯವಸ್ಥೆ ಹಾಗೂ ಕಾರ್ಪೊರೇಟೀಕರಣ ಸೇರಿದಂತೆ ಇಂದಿನ ಹಲವು ಬೆಳವಣಿಗೆಗಳು ಶಿಕ್ಷಕರ ತಾಳ್ಮೆಗೆ ಸವಾಲಾಗಿವೆ. ಇಂದಿನ ಕಾಲಘಟ್ಟದ ಎಲ್ಲ ಬದಲಾವಣೆಗಳಲ್ಲಿ ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಂಡು ಬದುಕಬೇಕಾದ ಅಗತ್ಯವಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲೇಖಕಿ ಸಾವಿತ್ರಿ ಮನೋಹರ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಷ್ಮಿನಾರಾಯಣ ಕೆ.ಎಸ್. ಹಾಗೂ ಸಹ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ನಂದಕಿಶೋರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಣಿ ಡಾ. ವಿಜಯ ಕುಮಾರಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಪ್ರಜ್ಞಾ ಕುಮಾರಿ ಎಚ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ. ಸುಚಿತ್ರ ವಂದಿಸಿದರು.




































