
ನವದೆಹಲಿ: ಭಾರತೀಯ ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ಸಂಸ್ಥೆಯಲ್ಲಿ ಉದ್ಯೋಗಾವಕಾಶ ಲಭ್ಯವಾಗಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 24 ಸಹಾಯಕ ವ್ಯವಸ್ಥಾಪಕ (ಮೆಕ್ಯಾನಿಕಲ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ಪೂರ್ಣಾವಧಿ B.E/B.Tech ಪದವಿ ಹೊಂದಿರಬೇಕು. ಮೆಕ್ಯಾನಿಕಲ್, ಪ್ರೊಡಕ್ಷನ್, ಇಂಡಸ್ಟ್ರಿಯಲ್, ಮೆಕಾಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್ ಪದವೀಧರರೂ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗಕ್ಕೆ ಶೇ.60 ಹಾಗೂ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಶೇ.50 ಅಂಕ ಅಗತ್ಯ.
ಅರ್ಜಿದಾರರ ಗರಿಷ್ಠ ವಯೋಮಿತಿ 32 ವರ್ಷ. ನಿಯಮಾನುಸಾರ ಒಬಿಸಿಗೆ 3 ವರ್ಷ, ಎಸ್‌ಸಿ/ಎಸ್‌ಟಿಗೆ 5 ವರ್ಷ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ₹600, ಇಡಬ್ಲ್ಯೂಎಸ್, ಎಸ್‌ಸಿ, ಎಸ್‌ಟಿ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ₹300 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಅಂತಿಮ ಮೆರಿಟ್‌ನಲ್ಲಿ ಲಿಖಿತ ಪರೀಕ್ಷೆಗೆ 60% ಹಾಗೂ ಸಂದರ್ಶನಕ್ಕೆ 40% ಅಂಕಗಳ ತೂಕ ನೀಡಲಾಗುತ್ತದೆ.
ಆಸಕ್ತರು ಆಗಸ್ಟ್ 17, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಹತೆ, ಶುಲ್ಕ ಮತ್ತು ನೇಮಕಾತಿಯ ಇತರೆ ವಿವರಗಳಿಗಾಗಿ RITESನ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.



























































