
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ 226 ತಾಲೂಕುಗಳು ಬರಪೀಡಿತವಾಗಿರುವ ಹಿನ್ನೆಲೆಯಲ್ಲಿ, ಗ್ರಾಮೀಣ ಬಡ ಕಾರ್ಮಿಕರಿಗೆ ವಿಬಿ-ಜಿ ರಾಮ್ ಜಿ ಯೋಜನೆಯಡಿ 175 ದಿನ ಉದ್ಯೋಗ ಕಲ್ಪಿಸಲು ಹೆಚ್ಚುವರಿ 50 ದಿನಗಳ ಕೆಲಸ ನೀಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಪತ್ರ ಬರೆದಿರುವ ಈಶ್ವರ್ ಖಂಡ್ರೆ, ರಾಜ್ಯದಲ್ಲಿನ ಮಳೆಯ ಕೊರತೆ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಪರಿಣಾಮವನ್ನು ವಿವರಿಸಿದ್ದಾರೆ. ಉದ್ಯೋಗದ ಕೊರತೆಯಿಂದ ಗ್ರಾಮೀಣ ಕಾರ್ಮಿಕರು ನಗರಗಳಿಗೆ ಗುಳೆ ಹೋಗುವುದನ್ನು ತಡೆಯಲು ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಭೂ ರಹಿತ ಕೂಲಿ ಕಾರ್ಮಿಕರು ಹಾಗೂ ಅಕುಶಲ ಕಾರ್ಮಿಕರಿಗೆ ಕೆಲಸ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಉದ್ಯೋಗದ ಬೇಡಿಕೆ ಹೆಚ್ಚಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.30.33ರಷ್ಟು ಹೆಚ್ಚುವರಿ ಮಾನವ ದಿನಗಳನ್ನು ಸೃಜಿಸಲಾಗಿದೆ.
ಹೀಗಾಗಿ ಪ್ರಸ್ತುತ ಇರುವ 125 ದಿನಗಳ ಉದ್ಯೋಗ ಮಿತಿಯನ್ನು 50 ದಿನ ಹೆಚ್ಚಿಸಿ, ಒಟ್ಟು 175 ದಿನಗಳ ಉದ್ಯೋಗ ಒದಗಿಸಲು ಅನುಮತಿ ನೀಡುವಂತೆ ಸಚಿವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ 60:40ರ ಅನುಪಾತದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2026ರ ಜುಲೈನಿಂದ 2027ರ ಮಾರ್ಚ್ವರೆಗಿನ ಒಂಬತ್ತು ತಿಂಗಳ ಅವಧಿಯಲ್ಲಿ ಯೋಜನೆಗೆ ಕೇಂದ್ರ ಸರ್ಕಾರ 5,657 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 3,771 ಕೋಟಿ ರೂ. ವೆಚ್ಚ ಮಾಡಲಿವೆ ಎಂದು ತಿಳಿಸಿದ್ದಾರೆ.
ಈವರೆಗೆ ರಾಜ್ಯ ಸರ್ಕಾರ 1,167 ಕೋಟಿ ರೂ. ಮತ್ತು ಕೇಂದ್ರ ಸರ್ಕಾರ 1,751 ಕೋಟಿ ರೂ. ಬಿಡುಗಡೆ ಮಾಡಿದ್ದು, ಒಟ್ಟು 2,918 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 803 ಕೋಟಿ ರೂ.ಗಳನ್ನು ಅಕುಶಲ ಕಾರ್ಮಿಕರ ವೇತನಕ್ಕಾಗಿ ಪಾವತಿಸಲಾಗಿದೆ.
ಅಲ್ಲದೆ, ರಾಜ್ಯದ 5,927 ಗ್ರಾಮ ಪಂಚಾಯಿತಿಗಳಿಗೆ 2,053 ಕೋಟಿ ರೂ. ಹಾಗೂ ಯೋಜನೆ ಅನುಷ್ಠಾನಗೊಳಿಸುವ ಇಲಾಖೆಗಳಿಗಾಗಿ 86 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























































































