
ಮುಂಬೈ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ನಟಿ ಕೃತಿ ಸನೋನ್ ಕಾಣಿಸಿಕೊಂಡಿರುವ ರಕ್ಷಾ ಬಂಧನ ಜಾಹೀರಾತಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾಹೀರಾತಿನಲ್ಲಿ ಕೃತಿ ಧರಿಸಿರುವ ಉಡುಪು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಆಭರಣ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಕೃತಿ ಆಫ್-ವೈಟ್ ಬಣ್ಣದ ಬ್ರಾಲೆಟ್ ಮಾದರಿಯ ಬ್ಲೌಸ್, ಕೇಪ್ ಹಾಗೂ ಡ್ರೇಪ್ಡ್ ಸ್ಕರ್ಟ್ ಧರಿಸಿದ್ದಾರೆ. ಈ ಜಾಹೀರಾತು ಭಾರತೀಯ ಹಬ್ಬವನ್ನು ಅಪಹಾಸ್ಯ ಮಾಡಿದೆ ಎಂದು ಕೆಲವರು ಆರೋಪಿಸಿದ್ದು, ಮತ್ತಷ್ಟು ಮಂದಿ ಕೃತಿಯ ಉಡುಪನ್ನು ಅತಿಯಾಗಿ ಮೈತೋರಿಸುವಂತಿದೆ ಎಂದು ಟೀಕಿಸಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರತಿಕ್ರಿಯಿಸಿರುವ ಕಂಗನಾ, ಮಹಿಳೆಯರಿಗೆ ಇಂದು ವಿವಿಧ ರೀತಿಯ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ. ಬಿಕಿನಿ ಅಥವಾ ಒಳ ಉಡುಪು ಮಾದರಿಯ ಉಡುಪು ಧರಿಸಿ ಸಹೋದರನಿಗೆ ರಾಖಿ ಕಟ್ಟುವ ಅಗತ್ಯವೇನು? ಇತರ ಸ್ಟೈಲಿಂಗ್ ಆಯ್ಕೆಗಳೆಲ್ಲ ಎಲ್ಲಿ ಹೋದವು ಎಂದು ಅವರು ಪ್ರಶ್ನಿಸಿದ್ದಾರೆ.
ಅಲ್ಲದೆ, ಜಾಹೀರಾತನ್ನು ಕಂಗನಾ ‘ಉದ್ದೇಶಪೂರ್ವಕವಾಗಿ ಅಹಿತಕರ’ ಎಂದು ಟೀಕಿಸಿದ್ದಾರೆ. ಜಾಹೀರಾತಿನಲ್ಲಿ ಕೃತಿ ನಾಯಿಗೆ ರಾಖಿ ಕಟ್ಟಿರುವ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ.



















































































