
ನವದೆಹಲಿ: ಅಜ್ಜನ ಆಸ್ತಿ ತಂದೆಗೆ ಹಂಚಿಕೆಯಾದ ಮಾತ್ರಕ್ಕೆ ಮೊಮ್ಮಗನಿಗೆ ಅದರಲ್ಲಿ ಜನ್ಮಸಿದ್ಧ ಹಕ್ಕು ದೊರೆಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆ 1956ರ ಸೆಕ್ಷನ್ 8ರ ಅಡಿಯಲ್ಲಿ ಅಜ್ಜನ ಆಸ್ತಿ ಮೊದಲನೇ ವರ್ಗದ ವಾರಸುದಾರರಿಗೆ ಹಂಚಿಕೆಯಾದರೆ, ತಂದೆಗೆ ದೊರೆತ ಪಾಲು ಅವರ ವೈಯಕ್ತಿಕ ಆಸ್ತಿಯಾಗುತ್ತದೆ. ಅದರಲ್ಲಿ ಮಗನಿಗೆ ಜನನದ ಆಧಾರದ ಮೇಲೆ ಹಕ್ಕು ಇರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸಿಹ್ ಮತ್ತು ಸುನೀತಾ ಅಗರ್ವಾಲ್ ಅವರ ಪೀಠ ಸ್ಪಷ್ಟಪಡಿಸಿದೆ. ತಂದೆಗೆ ಅಜ್ಜನಿಂದ ಬಂದ ಜಮೀನಿನಲ್ಲಿ ಅರ್ಧ ಪಾಲು ಕೇಳಿದ್ದ ಮಗನ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ ಏನು?
ತಮಿಳುನಾಡಿನಲ್ಲಿ ಅಜ್ಜನಿಗೆ ಸೇರಿದ 1,811 ಚದರ ಅಡಿ ಜಮೀನಿನ ಹಂಚಿಕೆ ವಿಚಾರವಾಗಿ ಈ ವಿವಾದ ಆರಂಭವಾಗಿತ್ತು. ಅಜ್ಜನ ಮಗಳು ಆಸ್ತಿ ವಿಭಜನೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 1994ರಲ್ಲಿ ನಡೆದ ರಾಜಿ ಒಪ್ಪಂದದಂತೆ ಜಮೀನಿನ ಒಂದು ಭಾಗ ಅರ್ಜಿದಾರನ ತಂದೆಗೆ ಸಿಕ್ಕಿತ್ತು. ಅದೇ ವರ್ಷ ಅರ್ಜಿದಾರ ಜನಿಸಿದ್ದ. ಆದರೆ 1997ರಲ್ಲಿ ತಂದೆ ಆ ಜಮೀನನ್ನು ಇಬ್ಬರು ಖರೀದಿದಾರರಿಗೆ ಮಾರಾಟ ಮಾಡಿದ್ದರು.
ಇದನ್ನು ಪ್ರಶ್ನಿಸಿ ಮಗನ ಪರವಾಗಿ ತಾಯಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅಜ್ಜನ ಆಸ್ತಿ ಜಂಟಿ ಕುಟುಂಬದ ಆಸ್ತಿಯಾಗಿದ್ದು, ತಂದೆಗೆ ಬಂದ ಪಾಲಿನಲ್ಲಿ ಮಗನಿಗೂ ಅರ್ಧ ಹಕ್ಕು ಇದೆ ಎಂದು ವಾದಿಸಿದ್ದರು.
ನ್ಯಾಯಾಲಯಗಳ ತೀರ್ಪು ಏನಾಗಿತ್ತು?
ಆರಂಭದಲ್ಲಿ ಚೆನ್ನೈನ ನಗರ ಸಿವಿಲ್ ನ್ಯಾಯಾಲಯ ಮಗನ ಪರವಾಗಿ ಆಸ್ತಿ ವಿಭಜನೆಯ ಪ್ರಾಥಮಿಕ ಆದೇಶ ನೀಡಿತ್ತು. ಆದರೆ ಮೇಲ್ಮನವಿ ನ್ಯಾಯಾಲಯ ಈ ಆದೇಶವನ್ನು ರದ್ದುಗೊಳಿಸಿ, ಸೆಕ್ಷನ್ 8ರ ಅಡಿಯಲ್ಲಿ ತಂದೆಗೆ ಬಂದ ಆಸ್ತಿ ಅವರ ವೈಯಕ್ತಿಕ ಸ್ವತ್ತು ಎಂದು ಹೇಳಿತ್ತು. ಮದ್ರಾಸ್ ಹೈಕೋರ್ಟ್ ಕೂಡ ಇದೇ ತೀರ್ಪನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಗ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ.
ಸುಪ್ರೀಂ ಕೋರ್ಟ್ನ ಸ್ಪಷ್ಟನೆ ಏನು?
ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ಹಿಂದೂ ಪುರುಷನೊಬ್ಬ ವಿಲ್ ಇಲ್ಲದೆ ಮೃತಪಟ್ಟರೆ ಆತನ ಆಸ್ತಿ ಮೊದಲನೇ ವರ್ಗದ ವಾರಸುದಾರರಿಗೆ ಹಂಚಿಕೆಯಾಗುತ್ತದೆ. ಈ ಪಟ್ಟಿಯಲ್ಲಿ ಮಗ, ಮಗಳು, ಪತ್ನಿ ಮತ್ತು ತಾಯಿ ಸೇರಿದಂತೆ ಕಾನೂನು ಗುರುತಿಸಿರುವ ವಾರಸುದಾರರು ಸೇರಿರುತ್ತಾರೆ.
ಈ ರೀತಿ ಅಜ್ಜನ ಆಸ್ತಿ ಹಂಚಿಕೆಯಾದಾಗ ತಂದೆಗೆ ದೊರೆತ ಪಾಲು ಅವರ ವೈಯಕ್ತಿಕ ಆಸ್ತಿಯಾಗುತ್ತದೆ. ಅದು ತಂದೆ ಮತ್ತು ಮಕ್ಕಳ ಜಂಟಿ ಕುಟುಂಬದ ಆಸ್ತಿಯಾಗಿ ಪರಿವರ್ತನೆಯಾಗುವುದಿಲ್ಲ. ಹೀಗಾಗಿ ಕೇವಲ ಜನನದ ಕಾರಣಕ್ಕೆ ಮೊಮ್ಮಗನಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಸಿಗುವುದಿಲ್ಲ ಎಂದು ಪೀಠ ತಿಳಿಸಿದೆ.
ಆದರೆ ಜಂಟಿ ಹಿಂದೂ ಕುಟುಂಬದ ಸಹಪಾಲುದಾರಿಕೆ ಆಸ್ತಿ ಮುಂದುವರಿದಿದ್ದರೆ, ಅದರ ಹಕ್ಕು ಮತ್ತು ಪಾಲಿನ ವಿಚಾರವನ್ನು ಪ್ರತ್ಯೇಕ ಕಾನೂನು ನಿಯಮಗಳಡಿ ನಿರ್ಧರಿಸಲಾಗುತ್ತದೆ. ಅದೇ ರೀತಿ ತಂದೆ ವಿಲ್ ಇಲ್ಲದೆ ಮೃತಪಟ್ಟರೆ, ಅವರ ಆಸ್ತಿಯಲ್ಲಿ ಮಗ, ಮಗಳು, ಪತ್ನಿ ಸೇರಿದಂತೆ ಮೊದಲನೇ ವರ್ಗದ ವಾರಸುದಾರರಿಗೆ ಕಾನೂನುಬದ್ಧ ಪಾಲು ದೊರೆಯುತ್ತದೆ.
ತೀರ್ಪಿನ ಮಹತ್ವವೇನು?
ಅಜ್ಜನಿಂದ ತಂದೆಗೆ ಬಂದ ಪ್ರತಿಯೊಂದು ಆಸ್ತಿಯಲ್ಲೂ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಆಸ್ತಿ ಯಾವ ರೀತಿಯಲ್ಲಿ ಹಸ್ತಾಂತರವಾಗಿದೆ, ಯಾವ ಕಾನೂನಿನಡಿ ಹಂಚಿಕೆಯಾಗಿದೆ ಮತ್ತು ಅದರ ಸ್ವರೂಪವೇನು ಎಂಬುದು ಹಕ್ಕು ನಿರ್ಧರಿಸುವಲ್ಲಿ ಪ್ರಮುಖವಾಗುತ್ತದೆ. ಅಜ್ಜನ ಆಸ್ತಿ, ತಂದೆಯ ವೈಯಕ್ತಿಕ ಆಸ್ತಿ ಹಾಗೂ ಜಂಟಿ ಕುಟುಂಬದ ಆಸ್ತಿಗಳ ನಡುವಿನ ಕಾನೂನು ವ್ಯತ್ಯಾಸವನ್ನು ಈ ತೀರ್ಪು ಮತ್ತೊಮ್ಮೆ ಸ್ಪಷ್ಟಪಡಿಸಿದೆ.





















































































