
ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರು ನವೆಂಬರ್ 10ರಂದು ದೂರು ಸಲ್ಲಿಸಿದ್ದು, ಸಚಿವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸುಳ್ಳು ಹಾಗೂ ದಾರಿತಪ್ಪಿಸುವ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಹಾರ ಮತ್ತು ಹರಿಯಾಣದಲ್ಲಿ ಒಟ್ಟು 44,250 ಜೀವಂತ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಆರ್ಎಸ್ಎಸ್ ಅನ್ನು ಪ್ರಿಯಾಂಕ್ ಖರ್ಗೆ ಅನಗತ್ಯವಾಗಿ ತಳುಕು ಹಾಕಿದ್ದಾರೆ ಎಂದು ಆರೋಪಿಸಿರುವ ದೂರುದಾರರು ಸಚಿವರ ಹೇಳಿಕೆಗಳು ಈ ಅಪರಾಧ ಜಾಲದಲ್ಲಿ ಆರ್ಎಸ್ಎಸ್ನ ಪಾತ್ರವಿದೆ ಎಂಬ ತಪ್ಪು ಅಭಿಪ್ರಾಯ ಮೂಡಿಸುವಂತಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುಳ್ಳು ಮಾಹಿತಿ ಹರಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹಾಗೂ ಸಾರ್ವಜನಿಕರಲ್ಲಿ ದ್ವೇಷ ಮತ್ತು ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಸೆಕ್ಷನ್ 192, 196 ಮತ್ತು 353ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.
ಗೃಹ ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಹೇಳಿಕೆಗಳು ಹೊರಬಂದರೆ ಸಾರ್ವಜನಿಕರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಸಾಮಾನ್ಯ ನಾಗರಿಕರಿಗೆ ಅನ್ವಯಿಸುವ ಕಾನೂನು ಸಚಿವರಿಗೂ ಅನ್ವಯವಾಗಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವುದರಿಂದ ಕ್ರಿಮಿನಲ್ ಕಾನೂನಿನಿಂದ ವಿನಾಯಿತಿ ಸಿಗುವುದಿಲ್ಲ ಎಂದು ದೂರುದಾರರು ಹೇಳಿದ್ದಾರೆ.
ದೂರಿನಲ್ಲಿರುವ ಆರೋಪಗಳಿಗೆ ಆಧಾರಗಳಿದ್ದರೆ ಸ್ವತಂತ್ರ ತನಿಖೆ ನಡೆಸಬೇಕು ಹಾಗೂ ಸಂಬಂಧಿತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಂರಕ್ಷಿಸಬೇಕು ಎಂದು ಪೊಲೀಸರನ್ನು ಕೋರಿದ್ದಾರೆ.
ಪ್ರಿಯಾಂಕ್ ಖರ್ಗೆ ಎಕ್ಸ್ ಪೋಸ್ಟ್ನಲ್ಲಿ ಏನಿತ್ತು?
ಕಾರ್ಟ್ರಿಡ್ಜ್ ವಶಪಡಿಸಿಕೊಂಡ ಪ್ರಕರಣ ಅಂತರರಾಜ್ಯ ಮದ್ದುಗುಂಡು ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದಿದೆ ಎಂದು ಪ್ರಿಯಾಂಕ್ ಖರ್ಗೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದರು. ಪ್ರಕರಣದ ಆರೋಪಿಗಳು ಆರ್ಎಸ್ಎಸ್ ಸಮವಸ್ತ್ರದಲ್ಲಿರುವ ಚಿತ್ರಗಳು ಮತ್ತು ವರದಿಗಳನ್ನು ಉಲ್ಲೇಖಿಸಿ, ಆರ್ಎಸ್ಎಸ್ ಹಾಗೂ ಬಿಜೆಪಿ ಐದು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಆರ್ಎಸ್ಎಸ್ ನೋಂದಣಿಯಾಗಬೇಕು ಎಂಬ ತಮ್ಮ ಹಿಂದಿನ ಒತ್ತಾಯವನ್ನೂ ಪುನರುಚ್ಚರಿಸಿದ್ದರು.
ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ ಪೊಲೀಸರು 19,250 ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದ್ದರು. ಮತ್ತೊಂದೆಡೆ, ಹರಿಯಾಣ ಎಸ್ಟಿಎಫ್ ಝಜ್ಜರ್ನ ರೋಹಾಡ್ ಟೋಲ್ ಪ್ಲಾಜಾ ಬಳಿ 25,000 ಕಾರ್ಟ್ರಿಡ್ಜ್ಗಳನ್ನು ಜಪ್ತಿ ಮಾಡಿತ್ತು. ಪ್ರಕರಣದ ಅಂತರರಾಜ್ಯ ಜಾಲದ ಕುರಿತು ತನಿಖೆ ಮುಂದುವರಿದಿದ್ದು, ಈವರೆಗೆ ಯಾವುದೇ ಸಂಘಟನೆಯ ಪಾತ್ರ ಸಾಬೀತಾಗಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.





















































































