
ಲಖನೌ: 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ಪದೇಪದೆ ಹೇಳುತ್ತಿದ್ದ ‘ಅಬ್ಕಿ ಬಾರ್, 400 ಪಾರ್’ ಘೋಷಣೆಯನ್ನು ಈಗ ಮರೆತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಲಖನೌನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ‘ಸಂವಿಧಾನ ರಕ್ಷಾ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಸೋಲುಣಿಸಿದ ಉತ್ತರ ಪ್ರದೇಶದ ಜನರಿಗೆ ಧನ್ಯವಾದ ಅರ್ಪಿಸಿದರು.
‘ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಎಲ್ಲೆಡೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದರು. ಆದರೆ, ಬಿಜೆಪಿಗೆ ಆ ಗುರಿ ತಲುಪಲು ಸಾಧ್ಯವಾಯಿತೇ? ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ’ ಎಂದು ಖರ್ಗೆ ಟೀಕಿಸಿದರು.
ಉತ್ತರ ಪ್ರದೇಶದ ಮತದಾರರು ಬಿಜೆಪಿಯನ್ನು ಮಂಡಿಯೂರುವಂತೆ ಮಾಡಿದ್ದಾರೆ. ಮೋದಿ ಅವರು ಇಂದು ಮೌನವಾಗಿರಲು ಅಲ್ಲಿನ ಜನರೇ ಕಾರಣ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಾರ್ವಜನಿಕ ಹೇಳಿಕೆಗಳು ಕಡಿಮೆಯಾಗಿರುವುದನ್ನು ಪ್ರಸ್ತಾಪಿಸಿ, ಮೋದಿ ಮತ್ತು ಅಮಿತ್ ಶಾ ನಡುವೆ ಎಲ್ಲವೂ ಸರಿಯಾಗಿದೆಯೇ ಎಂಬುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಸರನ್ನು ನೇರವಾಗಿ ಹೇಳದ ಖರ್ಗೆ, ಲಖನೌನಲ್ಲಿರುವ ಮತ್ತೊಬ್ಬ ನಾಯಕನಿಗೂ ಪ್ರಧಾನಿ ಕುರ್ಚಿಯ ಮೇಲೆ ಆಸೆಯಿದೆ ಎಂದು ಪರೋಕ್ಷವಾಗಿ ಟೀಕಿಸಿದರು.
ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚಾಗುತ್ತಿದ್ದು, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷದ ಖಜಾನೆ ಮಾತ್ರ ತುಂಬುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯ ಪಕ್ಷದ ನಿಧಿಯಲ್ಲಿ ಸುಮಾರು 10 ಸಾವಿರ ಕೋಟಿ ರೂಪಾಯಿ ಹೇಗೆ ಸಂಗ್ರಹವಾಗಿದೆ ಎಂದು ಪ್ರಶ್ನಿಸಿದ ಖರ್ಗೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲೂ ಪಕ್ಷದ ಬಳಿ ಈ ಮೊತ್ತದ ಹಣ ನಗದು ಮತ್ತು ಠೇವಣಿ ರೂಪದಲ್ಲಿರುವುದನ್ನು ಉಲ್ಲೇಖಿಸಿದರು.
ಇನ್ನು ಇಡಿ, ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಜನರನ್ನು ಬೆದರಿಸಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನು ಹಗಲು ದರೋಡೆ ಎಂದು ಕರೆದ ಖರ್ಗೆ, ಬಿಜೆಪಿ ತನ್ನ ಪಕ್ಷದ ನಿಧಿಯನ್ನು ಹೆಚ್ಚಿಸಿಕೊಳ್ಳಲು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

























































































