
ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ. ಇ-ಕೆವೈಸಿ ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ನವೆಂಬರ್ 10 ಕೊನೆಯ ದಿನವಾಗಿತ್ತು. ಫಲಾನುಭವಿಗಳ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಪಡಿತರ ಚೀಟಿದಾರರು ಅನ್ನಸೇವೆ ಆ್ಯಪ್ ಬಳಸಿ ಮನೆಯಲ್ಲೇ ಮೊಬೈಲ್ ಮೂಲಕ ಇ-ಕೆವೈಸಿ ಮಾಡಬಹುದು. ಇಲ್ಲವೇ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ನಿಗದಿತ ಗಡುವಿನೊಳಗೆ ಎಲ್ಲರೂ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಅನ್ನಸೇವೆ ಆ್ಯಪ್ ಸೌಲಭ್ಯವನ್ನು ರಾಜ್ಯದ 31 ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರದ ನಿಯಮದಂತೆ ಪ್ರತಿ ಐದು ವರ್ಷಕ್ಕೊಮ್ಮೆ ಇ-ಕೆವೈಸಿ ಕಡ್ಡಾಯವಾಗಿದೆ. ಹಿರಿಯ ನಾಗರಿಕರು ಮತ್ತು ಮಕ್ಕಳಿಗಾಗಿ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇದರಿಂದ ಉದ್ಯೋಗ ನಿಮಿತ್ತ ಬೇರೆ ನಗರಗಳಲ್ಲಿ ವಾಸಿಸುವವರು ಇ-ಕೆವೈಸಿಗಾಗಿ ಊರಿಗೆ ತೆರಳುವ ಅಗತ್ಯವಿರುವುದಿಲ್ಲ.
ಅನ್ನಸೇವೆ ಆ್ಯಪ್‌ನಲ್ಲಿ ಇ-ಕೆವೈಸಿ ಮಾಡುವ ವಿಧಾನ:
ರೇಷನ್ ಕಾರ್ಡ್ ಮತ್ತು ಅದಕ್ಕೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆ ಹೊಂದಿದ್ದರೆ ಮನೆಯಲ್ಲೇ ಇ-ಕೆವೈಸಿ ಪೂರ್ಣಗೊಳಿಸಬಹುದು.
- ಮೊಬೈಲ್‌ನಲ್ಲಿ ಅನ್ನಸೇವೆ ಆ್ಯಪ್ ತೆರೆಯಿರಿ.
- ಲಾಗಿನ್ ಆಯ್ಕೆಯಲ್ಲಿ ‘ಸ್ವಯಂ/ನಾಗರಿಕ’ ಎಂಬುದನ್ನು ಆಯ್ಕೆಮಾಡಿ.
- ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.
- ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ.
- ಕುಟುಂಬ ಸದಸ್ಯರ ಪಟ್ಟಿಯಲ್ಲಿ ಇ-ಕೆವೈಸಿ ಮಾಡಬೇಕಾದ ವ್ಯಕ್ತಿಯನ್ನು ಆಯ್ಕೆಮಾಡಿ.
- ಆ್ಯಪ್ ಸೂಚನೆಯಂತೆ ಮುಖ ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಳಿಸಿ.
‘ಇ-ಕೆವೈಸಿ ಯಶಸ್ವಿ’ ಎಂಬ ಸಂದೇಶ ಬಂದರೆ ಪ್ರಕ್ರಿಯೆ ಪೂರ್ಣಗೊಂಡಂತೆ. ಈ ಕುರಿತ ಮಾಹಿತಿ ಹಾಗೂ ಪ್ರಕ್ರಿಯೆಯ ವಿಡಿಯೋವನ್ನು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಈ ಹಿಂದೆಯೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.





















































































