23.9 C
Udupi
Tuesday, November 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 679

ಭರತೇಶ್ ಶೆಟ್ಟಿ ,ಎಕ್ಕಾರು

ಕುಂತಿ ಧೃಡತೆಯ ಧ್ವನಿಯಲ್ಲಿ ಉತ್ತರಿಸಿದಳು “ನಾನೂ ವಾನಪ್ರಸ್ಥಾಶ್ರಮ ಜೀವನವನ್ನು ಬಯಸಿದ್ದೇನೆ. ತಪೋವನಕ್ಕೆ ಹೋಗುತ್ತಿದ್ದೇನೆ” ಎಂದಳು.

ಪಾಂಡವರ ಸಹಿತ ಅಲ್ಲಿದ್ದ ಎಲ್ಲರಿಗೂ ಒಮ್ಮೆಲೆ ಸಿಡಿಲೆರಗಿದಂತಾಯಿತು. ಧರ್ಮರಾಯನು ಅದುರಿ ನಡುಗುವ ತುಟಿಗಳಲ್ಲಿ “ಅ… ಮ್ಮಾ…. ! ಏನು ಹೇಳುತ್ತಿರುವಿರಿ? ನಾವು ನಿಮ್ಮ ಬಗ್ಗೆ ಏನೇನೊ ಕನಸುಗಳನ್ನು ಕಟ್ಟಿ ಕೊಂಡಿದ್ದೇವೆ. ನಿಮ್ಮ ಸೇವೆ ಮಾಡುವ ಮಹದಾಸೆಯನ್ನು ಹೊತ್ತಿದ್ದೇವೆ. ನಿಮ್ಮ ಈ ತನಕದ ಬದುಕೇ ಅದು? ನಿಜಾರ್ಥದಲ್ಲಿ ತಪಸ್ಸಿನಂತೆ ಕಾಣುತ್ತಿದೆ. ನಿರಂತರ ಕಷ್ಟ, ದುಃಖ ನಿಮ್ಮ ಪಾಲಿನ ಸ್ಥಿರ ಆಸ್ತಿಯಾಗಿ ಹೋಗಿತ್ತು. ಈಗಲೂ ಅದನ್ನೇ ನೀವು ಆಯ್ಕೆ ಮಾಡುವಿರಾ ಅಮ್ಮಾ? ನಾವು ಹುಟ್ಟುವ ಮೊದಲು ನಿಮ್ಮ ಜೀವನದ ಕಷ್ಟದ ದಿನಗಳ ಕಥೆ ಕೇಳಿ ತಿಳಿದಿದ್ದೇವೆ. ಹೆತ್ತ ತಾಯಿ ತಂದೆಯ ಜೊತೆ ಬದುಕುವ ಅವಕಾಶ ನಿಮಗೆ ಸಿಕ್ಕಿರಲಿಲ್ಲವಂತೆ. ದತ್ತು ಪಡೆದ ಕುಂತಿಭೋಜನ ಅರಮನೆಯಲ್ಲಿ ಸಾಕು ತಾಯಿ ತಂದೆಯರೊಡನೆ ನೀವು ಬೆಳೆದು ದೊಡ್ಡವಳಾದಿರಂತೆ. ಆ ಬಳಿಕ ನಿಮ್ಮ ವಿವಾಹದ ಸ್ವಯಂವರ ನಡೆದು, ನಮ್ಮ ಅಪ್ಪ ಪಾಂಡು ಚಕ್ರವರ್ತಿಗಳು ವರಿಸಿ ಹಸ್ತಿನೆ ಸೇರಿದ ದಿನ, ನಿಮ ಮದುವೆಯಾದ ಮೊದಲ ದಿನದಂದು ಮೈತ್ರಿ ರಾಷ್ಟ್ರವಾದ ಮಾದ್ರಾ ದೇಶಕ್ಕೆ ಶತ್ರು ದಾಳಿಯಾದ ಸುದ್ದಿ ಬಂತಂತೆ. ಅಜ್ಜ ಭೀಷ್ಮಾಚಾರ್ಯರು ಮಾದ್ರಾದೇಶದ ಸಹಾಯಕ್ಕೆ ಸೇನೆಯೊಂದಿಗೆ ಹೋಗುತ್ತೇನೆ ಎಂದು ಹೇಳಿದರಾದರೂ, ಕೇಳದೆ ಅರಸನಾದ ನನ್ನ ಕರ್ತವ್ಯಕ್ಕೆ ಚ್ಯುತಿ ಬರಬಾರದು‌ ನಾನೇ ಹೋಗುತ್ತೇನೆ ಎಂದು ಅಪ್ಪ ಸಮರಕ್ಕೆ ಹೊರಟು ಹೋದರಂತೆ. ಯುದ್ದ ಗೆದ್ದರು, ಆ ಸಂತೋಷದಲ್ಲಿ ಮಾದ್ರಾದೀಶನಾದ “ಋತಾಯನ” ತನ್ನ ಮಗಳು “ಮಾದ್ರಿ”ಯನ್ನಿತ್ತು ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಿ ಸಂಬಂಧ ಬೆಳೆಸಿದರಂತೆ. ಹಾಗಾಗಿ ನಮ್ಮ ಅಪ್ಪನನ್ನು ಹಂಚಿಕೊಳ್ಳಲು ಎರಡನೆಯ ಪತ್ನಿಯೂ ಪ್ರಾಪ್ತವಾದಂತಾಯಿತು. ಮಾದ್ರಾ ದೇಶದಿಂದ ಮರಳಿ ಬಂದ ವಧುವರರ ಬಗ್ಗೆ ಯೋಚಿಸಿದ ಭೀಷ್ಮ ಪಿತಾಮಹರು ನೀವು ಮೂವರನ್ನು ವನ ವಿಹಾರಕ್ಕೆ ಕಳುಹಿಸಿದರಂತೆ. ನಮ್ಮ ಅಪ್ಪ ಸದಾ ರಾಜಕೀಯ, ಜವಾಬ್ದಾರಿಯಲ್ಲಿ ಮುಳುಗಿರುತ್ತಿದ್ದುದನ್ನು ಗಮನಿಸಿ ಸಾಂಸಾರಿಕ ಸುಖ ಜೀವನವನ್ನು ಪಾಂಡು ಚಕ್ರವರ್ತಿ ಅನುಭವಿಸಬೇಕೆಂಬ ಯೋಚನೆ ಅವರದ್ದಾಗಿರಬಹುದು. ಆದರೆ ವಿಧಿ ವಿಚಿತ್ರವಾಗಿ ವರ್ತಿಸಿತಂತೆ. ನೀವು ವಿಹಾರಾರ್ಥಿಗಳಾಗಿ ವನ ಸೇರುವ ಸಮಯ ಅಲ್ಲೊಂದು ದುರ್ಘಟನೆ ನಡೆಯಿತಂತೆ.

ಕಿಂದಮ ಎಂಬ ಮಹರ್ಷಿ ಹಗಲು ಹೊತ್ತಿನಲ್ಲಿ ಪತ್ನಿಯೊಂದಿಗೆ ಮೈಥುನವನ್ನು ಬಯಸಿದ್ದರಂತೆ. ಆದರೆ ಶಾಸ್ತ್ರ ಪ್ರಕಾರ ಸೂರ್ಯ ಆಕಾಶದಲ್ಲಿರುವ ಹಗಲು ಹೊತ್ತು‌ ಮನುಷ್ಯರು ಹಾಗೆ ಕೂಡಬಾರದು ಎಂಬ ನಿಷಿದ್ಧ ಶಾಸ್ತ್ರವಿರುವುದನ್ನು ಅರಿತಿದ್ದ ಋಷಿವರ ತನ್ನ ತಪಸ್ಶಕ್ತಿಯಿಂದ ಪತ್ನಿಯನ್ನು ಸುಂದರ ಜಿಂಕೆಯಾಗಿ ರೂಪಾಂತರಗೊಳಿಸಿದ್ದರಂತೆ. ಬಳಿಕ ತನ್ನ ಇಚ್ಚಾರೂಪ ಧಾರಣ ಶಕ್ತಿಯಿಂದ ಗಂಡು ಜಿಂಕೆಯಾಗಿದ್ದರಂತೆ. ಮಿಲನ ಕ್ರೀಡೆಯಲ್ಲಿ ಸರಸದಾಟವಾಡುತ್ತಿದ್ದ ಸಮಯ ನೀವು ದಂಪತಿಗಳು ಪ್ರಕೃತಿ ಸೌಂದರ್ಯ ಸವಿಯುತ್ತಾ ಅದೇ ವನ ಸೇರಿದಿರಂತೆ. ಆ ಸಮಯ ಚಿಕ್ಕಮ್ಮ ಮಾದ್ರಿದೇವಿಗೆ ಆ ಜಿಂಕೆಯನ್ನು ಕಂಡು ಮನಸೋತು ತನಗೆ ಬೇಕೆಂಬ ಮನಸ್ಸಾಯಿತಂತೆ. ನೀವು ತಡೆದರೂ ಕೇಳದೆ ಚಿಕ್ಕಮ್ಮ ಹಠ ಹಿಡಿದರಂತೆ. ಪರಿಣಾಮ ಅಪ್ಪ ಆ ಜಿಂಕೆಗಳನ್ನು ಹಿಡಿಯುವ ಪ್ರಯತ್ನ ಮಾಡಿದರೂ ಆಗದೆ ಹೋದಾಗ ಶರ ಪ್ರಯೋಗಿಸಿದರಂತೆ. ಶರಾಘಾತದಿಂದ ಎರಡೂ ಜಿಂಕೆಗಳು ಸಾಯುವ ಸ್ಥಿತಿಯಲ್ಲಿ ನಿಜ ರೂಪ ಧಾರಣೆ ಮಾಡಿ ಋಷಿ ದಂಪತಿಗಳಾದರಂತೆ. ಮರಣವೇದನೆಯ ಆ ಹೊತ್ತು ಶರ ಪ್ರಯೋಗಿಸಿದ ನಮ್ಮ ಅಪ್ಪನಿಗೆ ಶಾಪವಿತ್ತರಂತೆ. “ನನ್ನ ಮನದಾಸೆ ಈಡೇರಿಸುವ ಸಮಯ ಭಂಗ ಮಾಡಿದ್ದು ಮಾತ್ರವಲ್ಲದೆ, ಹತ್ಯೆಯನ್ನು ಮಾಡಿದೆ. ಇದೋ ನಿನ್ನಿಂದಾಗಿ ನನ್ನ ಆಸೆ ಕೈಗೂಡದೆ ನಾನು ಸಾಯುವಂತಾಯಿತು. ಈ ರೀತಿಯ ದುಷ್ಕೃತ್ಯ ಮಾಡಿದ ನೀನು ಶಾಪಗ್ರಸ್ಥನಾಗ ಬೇಕು. ನೀನು‌ ನಿನ್ನ ರಾಣಿಯರನ್ನು ಕೂಡಿಕೊಂಡು ವಿಹಾರಕ್ಕಾಗಿ ಬಂದಿರುವೆ. ನಿನ್ನ ಆಸೆಯೂ ಕೈಗೂಡದೆ ಹೋಗಲಿ. ನೀನು ನಿನ್ನ ಪತ್ನಿಯರನ್ನಾಗಲಿ ಅಥವಾ ಯಾವುದೆ ಹೆಣ್ಣಿನ ಜೊತೆಯಾಗಲಿ ಸಂಸರ್ಗಕ್ಕೆ ಮುಂದಾದರೆ ಆ ಸಮಯ ಸ್ಪರ್ಶ ಮಾತ್ರದಿಂದ ನಿನಗೆ ಮರಣ ಪ್ರಾಪ್ತವಾಗಲಿ” ಎಂದು ಶಪಿಸಿದರಂತೆ. ಎಂತಹ ದೌರ್ಭಾಗ್ಯವಮ್ಮಾ! ಮದುವೆಯಾಗಿ ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಾಗ ಅಪ್ಪನಿಗೆ ಯುದ್ದ ಎದುರಾಯಿತು. ಮರಳಿ ಬಂದು ವಿಹಾರಕ್ಕೆ ಹೊರಟರೆ ಅಲ್ಲಿ ಶಾಪಗ್ರಸ್ಥರಾದರು. ಈ ಬೆಳವಣಿಗೆಯ ಕಾರಣದಿಂದ ವೈರಾಗ್ಯ ತಳೆದ ಅಪ್ಪ ಸನ್ಯಾಸ ಸ್ವೀಕರಿಸಿ ರಾಜ್ಯ, ಅಧಿಕಾರ, ರಾಜ ಲಾಂಛನಗಳನ್ನೆಲ್ಲಾ ಮರಳಿ ಹಸ್ತಿನೆಗೆ ಕಳುಹಿಸಿ ವನವಾಸಿಯಾದರಂತೆ. ಅದ್ಯಾವ ಸುಕೃತ ಫಲವೋ ದೂರ್ವಾಸರಿಂದ ನಿಮಗೆ ಪ್ರಾಪ್ತವಾಗಿದ್ದ ಬೀಜ ಮಂತ್ರ ಬಲ ಮುಖೇನ ದೇವತಾನುಗ್ರಹದಿಂದ ನಾವು ಐವರು ಜನ್ಮ ತಾಳುವಂತಾಯಿತಂತೆ. ನಾವು ಹುಟ್ಟಿ ಬೆಳೆಯುತ್ತಿರುವಾಗ ಚಿಕ್ಕಮ್ಮ ಮಾದ್ರಿ ದೇವಿಯವರನ್ನು ಬಯಸಿ ಅಪ್ಪನ ಮರಣವಾಯಿತು. ಚಿಕ್ಕಮ್ಮನೂ ಸಹಗಮನ ಮಾಡಿದರು. ನೀವು ಮಾತ್ರ ಮಕ್ಕಳಾದ ನಮ್ಮ ಪಾಲನೆಗೆ ಗಟ್ಟಿ ಮನಸ್ಸು ಮಾಡಿ ಬದುಕುಳಿದಿರಿ. ಅಲ್ಲಿಂದ ಋಷಿಗಳ ಜೊತೆ ಹಸ್ತಿನೆಗೆ ಬಂದೆವಾದರೂ ನಿಮ್ಮ ಪಾಲಿಗೆ ಬೆಂಬಿಡದೆ ಬಂದದ್ದು ದುಃಖ ಮಾತ್ರ. ಕಾರಣ ದೊಡ್ಡಪ್ಪನ ಮಕ್ಕಳು ಕೌರವರು ಮತ್ತು ನಾವು ಪಾಂಡವರು ಸದಾ ಮಕ್ಕಳಾಟಿಕೆಯ ಜಗಳವಾಡುತ್ತಾ ದೂರುಗಳ ಸರಮಾಲೆಯನ್ನು ತರುತ್ತಿದ್ದೆವು. ನಂತರ ಗುರುಗಳಾದ ಕೃಪಾಚಾರ್ಯರು, ದ್ರೋಣಾಚಾರ್ಯರಿಂದ ವಿದ್ಯೆ ಪಡೆದು ಬಂದು ಹಸ್ತಿನೆ ಸೇರಿದರೆ ಅಲ್ಲೂ ಒಂದು ಮಹತ್ವದ ತಿರುವು ನಮಗೊದಗಿತು. ವಾರಣಾವತದ ಅರಗಿನ ಅರಮನೆಗೆ ನಾವು ಹೋಗುವಂತಾಯಿತು. ನಮ್ಮನ್ನು ಸುಟ್ಟು ಭಸ್ಮ ಮಾಡುವ ಯೋಜನೆಯ ಆ ತಂತ್ರದಿಂದ ಚಿಕ್ಕಪ್ಪ ವಿದುರ ಮಹಾಶಯರ ಸೂಚನೆಯಿಂದ ಹೇಗೋ ಪಾರಾಗುವ ದಾರಿ ಕಂಡುಕೊಂಡೆವು. ಬದುಕುಳಿದ ನಾವು ಮತ್ತೆ ಕಾಡು ಪಾಲಾದೆವು. ಸುಟ್ಟು ಹೋದ ಅರಗಿನ ಅರಮನೆಯಲ್ಲಿ ಸತ್ತಿದ್ದೇವೆ ಎಂದು ನಮಗೆ ಉತ್ತರಕ್ರಿಯೆಯೂ ಆಗಿ ಹೋಗಿದೆ. ಆದರೆ ವನವಾಸದಲ್ಲಿ ನಾವು ಬಕ, ಹಿಡಿಂಬರ ವಧೆ, ದ್ರೌಪದೀ ಸ್ವಯಂವರಗಳೆಲ್ಲ ಆದ ಬಳಿಕ ಪ್ರಕಟರಾದೆವು. ಮರಳಿ ಹಸ್ತಿನೆಗೆ ಬಂದು ಇಂದ್ರಪ್ರಸ್ಥ, ರಾಜಸೂಯ ಯಾಗ ಎಲ್ಲ ನಡೆಯಿತು. ದ್ಯೂತ ನಡೆದು ಸೋತ ನಮಗೆ ವನವಾಸ ಮತ್ತೆ ಭಾಗ್ಯವಾಗಿ ಬಂತು. ಆಗ ನೀವು ಧರ್ಮಾತ್ಮರಾದ ವಿದುರ ಚಿಕ್ಕಪ್ಪನ ಮನೆಯಲ್ಲಿ ಕಾಲ ಕಳೆಯುವಂತಾಯಿತು. ವನವಾಸ ಅಜ್ಞಾತವಾಸ ಕಳೆದು ಬಂದು ಮಹಾಭಾರತ ಯುದ್ದ ನಡೆದು ಹೋಯಿತು. ಆ ಮಹಾ ದುರಂತದಲ್ಲಿ ಮಕ್ಕಳು ಮೊಮ್ಮಕ್ಕಳ ಮರಣದ ದುಃಖವನ್ನು ನೀವು ಉಣ್ಣುವಂತಾಯಿತು. ಈಗ ನಿಮ್ಮ ಮಕ್ಕಳು ರಾಜ್ಯವಾಳುವ ಸಮಯವಾದರೂ ನೀವು ಸುಖವಾಗಿದ್ದು ರಾಜ ಮಾತೆಯಾಗಿ ನೆಮ್ಮದಿಯ ದಿನಗಳನ್ನು ಕಾಣುವಂತಾಗಲಿ ಎಂದು ನಾವು ಬಯಸಿದರೆ ಮತ್ತೆ ಕಾಡು ಸೇರುವ ಮನಸ್ಸು ನಿನ್ನದ್ದಾಯಿತೆ ಅಮ್ಮಾ? ಇದ್ಯಾವ ನ್ಯಾಯ ತಾಯಿ? ಬದುಕಿನ ಅರ್ಧ ಆಯಸ್ಸು ವನದಲ್ಲಿ ಕಳೆದವರು ನೀವು! ಈಗ ನಮ್ಮ ಜೊತೆಯಲ್ಲಿ ಉಳಿದು ನಮಗೆ ಮಾತೃ ವಾತ್ಸಲ್ಯವನ್ನು ಉಣಿಸುತ್ತಿರಬೇಕಮ್ಮಾ… ನಿಮ್ಮ ಕಷ್ಟದ ಬದುಕಲ್ಲಿ ಇಷ್ಟದ ಕ್ಷಣಗಳನ್ನು ನಾವು ನಿಮಗೊದಗಿಸುವ ಭಾಗ್ಯ ಕರುಣಿಸಮ್ಮಾ!” ಎಂದು ಧರ್ಮರಾಯ ಕುಂತಿಯ ಜೀವನ ಚರಿತ್ರೆಯನ್ನು ನೆನೆದು ಹೇಳುತ್ತಾ ಬೇಡಿಕೊಂಡನು.

ಆದರೆ ಕುಂತಿಯ ಉತ್ತರ ಬೇರೆಯಾಗಿತ್ತು. ಆಕೆಯ ಪ್ರಶ್ನೆಗಳಿಗೆ ಧರ್ಮರಾಯನ ಬಳಿ ಉತ್ತರವೇ ಇರಲಿಲ್ಲ

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page