
ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ತೆರೆಯಲಿದೆ. ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ 14 ದಿನಗಳ ಕಾಲ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಉತ್ಸವದ ಸಿದ್ಧತೆ, ದರ್ಶನ ವ್ಯವಸ್ಥೆ ಹಾಗೂ ಸಾರಿಗೆ ಸೌಲಭ್ಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.
ಭಕ್ತರ ಅನುಕೂಲಕ್ಕಾಗಿ ಉಚಿತ ಧರ್ಮದರ್ಶನದ ಜೊತೆಗೆ 300 ರೂ. ಮತ್ತು 1,000 ರೂ.ಗಳ ವಿಶೇಷ ಕ್ಯೂ ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಗೋಲ್ಡನ್ ಪಾಸ್ ಹೊಂದಿರುವವರಿಗೆ ಬೆಳಿಗ್ಗೆ 8ರಿಂದ 10ರವರೆಗೆ ದರ್ಶನಕ್ಕೆ ಅವಕಾಶವಿದ್ದು, ಒಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಗಣ್ಯರಿಗೆ ವಿಐಪಿ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರೆಯ ಮೊದಲ ಹಾಗೂ ಕೊನೆಯ ದಿನ ಶಿಷ್ಟಾಚಾರ ಮತ್ತು ಪಾಸ್ಗಳಿಗೆ ಅವಕಾಶವಿರುವುದಿಲ್ಲ.
ದೇವಸ್ಥಾನದಲ್ಲಿ ವಿತರಿಸುವ ಪ್ರಸಾದದ ದರವನ್ನೂ ನಿಗದಿಪಡಿಸಲಾಗಿದೆ. ಎರಡು ಲಡ್ಡುಗಳಿಗೆ 56 ರೂ. ಹಾಗೂ ಒಂದು ದೊನ್ನೆ ಪ್ರಸಾದಕ್ಕೆ 17 ರೂ. ದರ ನಿಗದಿಯಾಗಿದೆ.
ಈ ಬಾರಿ 30 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭದ್ರತೆಗಾಗಿ 2,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ಇರಿಸಲಾಗುತ್ತದೆ. ಹಾಸನಾಂಬೆ ಉತ್ಸವವು ಇಂದು ನಾಡಹಬ್ಬದ ಸ್ವರೂಪ ಪಡೆದಿದ್ದು, ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರನ್ನು ಪ್ರೀತಿಯಿಂದ ಸ್ವಾಗತಿಸಬೇಕು ಎಂದು ಸಚಿವ ಶಿವಲಿಂಗೇಗೌಡ ಮನವಿ ಮಾಡಿದ್ದಾರೆ.
ಹಾಸನಾಂಬೆ ಜಾತ್ರೆಯ ಅಂಗವಾಗಿ ಮೈಸೂರು ದಸರಾ ಮಾದರಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 450 ಮಂದಿ ಭಾಗವಹಿಸುವ ಮುಕ್ತ ಕುಸ್ತಿ ಪಂದ್ಯಾವಳಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಬಡ್ಡಿ ಹಾಗೂ ವಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ. ಹಳ್ಳಿಕಾರ್ ಮತ್ತು ಅಮೃತ ಮಹಲ್ ತಳಿಯ ಜೋಡೆತ್ತುಗಳ ಪ್ರದರ್ಶನದ ಜೊತೆಗೆ ಶ್ವಾನ, ಬೆಕ್ಕು ಹಾಗೂ ಟಗರುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಆಕರ್ಷಣೆಯಾಗಲಿವೆ.
ದೂರದ ಊರುಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಬೆಂಗಳೂರು–ಹಾಸನ ಹಾಗೂ ಅರಸೀಕೆರೆ–ಹಾಸನ ಮಾರ್ಗಗಳಲ್ಲಿ ಎರಡು ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಮೈಸೂರು, ಬೆಂಗಳೂರು, ಮಡಿಕೇರಿ ಸೇರಿದಂತೆ ಪ್ರಮುಖ ಜಿಲ್ಲೆಗಳಿಂದ ಹಾಸನಕ್ಕೆ 200ಕ್ಕೂ ಹೆಚ್ಚು ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳನ್ನು ನಿಯೋಜಿಸಲಾಗಿದೆ.
























