32.8 C
Udupi
Monday, October 12, 2026
spot_img
spot_img
HomeBlog"ಶಾಂತಿಯುತ ಪ್ರತಿಭಟನಾಕಾರರನ್ನು ಅಕ್ರಮವಾಗಿ ಬಂಧಿಸಬೇಡಿ": ಸುಪ್ರೀಂ ಕೋರ್ಟ್ ಸೂಚನೆ

“ಶಾಂತಿಯುತ ಪ್ರತಿಭಟನಾಕಾರರನ್ನು ಅಕ್ರಮವಾಗಿ ಬಂಧಿಸಬೇಡಿ”: ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರನ್ನು ಕಾನೂನುಬಾಹಿರವಾಗಿ ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್ ಭಾನುವಾರ ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಮೆಟ್ರೋ ಸೇವೆಗಳು ಸಹಜವಾಗಿ ಮುಂದುವರಿಯಬೇಕು, ಇಂಟರ್ನೆಟ್ ಸಂಪರ್ಕಕ್ಕೆ ಅಡ್ಡಿಯಾಗಬಾರದು ಹಾಗೂ ಪತ್ರಕರ್ತರು ಮತ್ತು ವಕೀಲರ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

ಕಾಂಗ್ರೆಸ್ ಜನತಾ ಪಾರ್ಟಿ (ಸಿಜೆಪಿ) ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ವೇಳೆ ಬಂಧನ ಹಾಗೂ ಮೆಟ್ರೋ ಸೇವೆಗಳ ಮೇಲಿನ ನಿರ್ಬಂಧಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಈ ವೇಳೆ ಪೊಲೀಸರು ಸಾವಿರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದು, ಕೆಲವರನ್ನು ಬಲವಂತವಾಗಿ ವಾಹನಗಳಲ್ಲಿ ಕರೆದೊಯ್ದಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.

7,000ಕ್ಕೂ ಹೆಚ್ಚು ಮಂದಿ ವಶಕ್ಕೆ?

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ, ವಿವಿಧ ವಿರೋಧ ಪಕ್ಷಗಳ ಮುಖಂಡರು, ಯೂಟ್ಯೂಬರ್ ಧ್ರುವ ರಾಠಿ ಸೇರಿದಂತೆ 7,000ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆರ್.ಕೆ. ಆಶ್ರಮ ಮೆಟ್ರೋ ನಿಲ್ದಾಣದ ಸಮೀಪವೂ ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದ್ದು, ಕೆಲವರನ್ನು ನಾಂಗ್ಲೋಯಿಯ ಸೂರಜ್‌ಮಲ್ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗಿದೆ ಎಂದು ಎಸ್‌ಎಫ್‌ಐ ತಿಳಿಸಿದೆ.

ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಆದರ್ಶ್ ಎಂ. ಸಾಜಿ, ದೆಹಲಿ ರಾಜ್ಯ ಕಾರ್ಯದರ್ಶಿ ಸೂರಾಜ್ ಎಲ್ಮನ್ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಅಭಿಜಿತ್ ಮಣಿಲಾಲ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಘಟನೆ ಹೇಳಿದೆ. ಸಿಪಿಎಂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಅವರ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಾಜಿ ಮುಖ್ಯಮಂತ್ರಿಗಳೂ ವಶಕ್ಕೆ:

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂದಾದ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್ ಹಾಗೂ ತ್ರಿಪುರಾದ ಮಾಣಿಕ್ ಸರ್ಕಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಕನಾಟ್ ಪ್ಲೇಸ್, ರಾಜೀವ್ ಚೌಕ್ ಹಾಗೂ ಗುರುದ್ವಾರ ಬಂಗ್ಲಾ ಸಾಹಿಬ್ ಸಮೀಪವೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರ ಕ್ರಮಕ್ಕೆ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನೀಡಿದ ಸೂಚನೆಗಳು

  • ದೆಹಲಿ ಮೆಟ್ರೋ ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬೇಕು ಮತ್ತು ಇಂಟರ್ನೆಟ್ ಸೇವೆಗಳಿಗೆ ಅಡ್ಡಿಯಾಗಬಾರದು.
  • ವಕೀಲರು, ಪತ್ರಕರ್ತರು ಹಾಗೂ ಇತರ ವೃತ್ತಿಪರರು ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು.
  • ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೆ ಯಾರನ್ನೂ ಬಂಧಿಸಬಾರದು.
  • ಸುಪ್ರೀಂ ಕೋರ್ಟ್ ಆವರಣದ ಹೊರಗೆ ಬಿಎನ್‌ಎಸ್‌ಎಸ್ ಸೆಕ್ಷನ್ 163ರ ಅಡಿ ನಿಷೇಧಾಜ್ಞೆ ಕುರಿತು ಹಾಕಿರುವ ಫಲಕವನ್ನು ತೆರವುಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

ವಕೀಲರಿಂದ ಬಂಧನಕ್ಕೆ ಆಕ್ಷೇಪ:

ಆರ್‌ಜೆಡಿ ಸಂಸದ ಮನೋಜ್ ಝಾ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಜಂತರ್ ಮಂತರ್‌ನಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದ್ದವರನ್ನೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶದ ಹೊರತಾಗಿಯೂ 45 ಮೆಟ್ರೋ ನಿಲ್ದಾಣಗಳಲ್ಲಿ ನಿರ್ಬಂಧ ವಿಧಿಸಲಾಗಿತ್ತು ಎಂದು ತಿಳಿಸಿದರು.

ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ವಿರೋಧ ಪಕ್ಷಗಳ ನಾಯಕರು ಸೇರಿದಂತೆ ಸಾವಿರಾರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಪ್ರತಿಭಟನೆಯ ವೇಳೆ ವಕೀಲರ ಮೇಲೂ ದೌರ್ಜನ್ಯ ನಡೆದಿದೆ ಎಂದು ಹಿರಿಯ ವಕೀಲ ಶಾದನ್ ಫರಾಸತ್ ಆರೋಪಿಸಿ, ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸುವಂತೆ ಮನವಿ ಮಾಡಿದರು.

ಜನರ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿ, ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಮೆಟ್ರೋ ಸೇವೆಗಳನ್ನು ಸಹಜ ಸ್ಥಿತಿಗೆ ತರಬೇಕು ಎಂದು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಒತ್ತಾಯಿಸಿದರು. ಅರ್ಜಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಹಾಗೂ ದೆಹಲಿ ಮೆಟ್ರೋ ರೈಲು ನಿಗಮದ ಅಧ್ಯಕ್ಷ ಡಿ. ತಾರಾ ಅವರನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

ಮೆಟ್ರೋ ನಿರ್ಬಂಧದ ಬಗ್ಗೆ ಕೇಂದ್ರದ ಸ್ಪಷ್ಟನೆ:

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೆಹಲಿಯ ಒಟ್ಟು 303 ಮೆಟ್ರೋ ನಿಲ್ದಾಣಗಳ ಪೈಕಿ ಅಕ್ಟೋಬರ್ 10ರಂದು 45 ನಿಲ್ದಾಣಗಳಲ್ಲಿ ಮಾತ್ರ ಪ್ರವೇಶ ಮತ್ತು ನಿರ್ಗಮನಕ್ಕೆ ನಿರ್ಬಂಧ ವಿಧಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದು ಒಟ್ಟು ಮೆಟ್ರೋ ಜಾಲದ ಶೇ.15ರಷ್ಟಾಗಿದೆ ಎಂದ ಅವರು, ವಶಕ್ಕೆ ಪಡೆದವರಲ್ಲಿ ಬಹುತೇಕರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ವಾದಿಸಿದರು.

ಪತ್ರಕರ್ತರನ್ನೂ ವಶಕ್ಕೆ ಪಡೆದ ಆರೋಪ:

ರೈಸಿನಾ ರಸ್ತೆಯಲ್ಲಿರುವ ಪ್ರೆಸ್ ಕ್ಲಬ್ ಸಮೀಪ ಇಬ್ಬರು ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುತ್ತಿದ್ದುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಸೇಕ್ರೆಡ್ ಹಾರ್ಟ್ ಚರ್ಚ್‌ನ ಬಿಜು ಕ್ಸೇವಿಯರ್ ಅವರನ್ನು ಬಂಧಿಸಲಾಗಿದೆ ಎಂದೂ ಸಂಘಟನೆ ದೂರಿದೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ನಡುವೆಯೂ ಪ್ರತಿಭಟನಾಕಾರರ ಮೇಲೆ ಬಲವಂತದ ಕ್ರಮ ಕೈಗೊಳ್ಳಲಾಗಿದೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯ ಹಕ್ಕು, ಸಾರ್ವಜನಿಕ ಸಂಚಾರ ಮತ್ತು ಪೊಲೀಸ್ ಕ್ರಮಗಳ ಕುರಿತು ನ್ಯಾಯಾಲಯದ ವಿಚಾರಣೆ ಮಹತ್ವ ಪಡೆದುಕೊಂಡಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page