
ತಿರುಮಲ ಶ್ರೀವಾರಿ ಭಕ್ತರಿಗೆ ಟಿಟಿಡಿ ಮಹತ್ವದ ಮಾಹಿತಿ ನೀಡಿದೆ. ಶ್ರೀವಾರಿ ನವರಾತ್ರಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಕ್ಟೋಬರ್ 12, 13, 14, 18, 19 ಹಾಗೂ 20ರಂದು ದರ್ಶನಕ್ಕೆ ₹ 300 ಮೌಲ್ಯದ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಆನ್‌ಲೈನ್ ಕೋಟಾವನ್ನು ಟಿಟಿಡಿ ಬಿಡುಗಡೆ ಮಾಡಿದೆ. ಅಕ್ಟೋಬರ್ 7ರಂದು ಬೆಳಗ್ಗೆ 10 ಗಂಟೆಯಿಂದ ಟಿಕೆಟ್‌ಗಳು ಲಭ್ಯವಾಗಲಿದ್ದು, ಭಕ್ತರು ಅಧಿಕೃತ ಟಿಟಿಡಿ ವೆಬ್‌ಸೈಟ್ ಮೂಲಕವೇ ಬುಕ್ಕಿಂಗ್ ಮಾಡಬೇಕು ಎಂದು ಸೂಚಿಸಲಾಗಿದೆ.
ಪೆರತಾಸಿ ಮಾಸದ ಕೊನೆಯ ವಾರ ಹಾಗೂ ನವರಾತ್ರಿ ಬ್ರಹ್ಮೋತ್ಸವ ಒಂದೇ ಸಮಯದಲ್ಲಿ ಬರುತ್ತಿರುವುದರಿಂದ ಲಕ್ಷಾಂತರ ಭಕ್ತರು ತಿರುಮಲಕ್ಕೆ ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಅಕ್ಟೋಬರ್ 11ರಿಂದ 20ರವರೆಗೆ ಪ್ರೋಟೋಕಾಲ್ ಪ್ರಮುಖರನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಐಪಿ ಬ್ರೇಕ್ ದರ್ಶನಗಳನ್ನು ರದ್ದುಪಡಿಸಲಾಗಿದೆ.
ಸಾಮಾನ್ಯ ಭಕ್ತರಿಗೆ ಹೆಚ್ಚಿನ ಸಮಯ ದರ್ಶನ ಸಿಗುವಂತೆ ವೃದ್ಧರು, ಅಂಗವಿಕಲರು, ಸಣ್ಣ ಮಕ್ಕಳಿರುವ ಪೋಷಕರು, ಎನ್‌ಆರ್‌ಐ ಹಾಗೂ ರಕ್ಷಣಾ ಸಿಬ್ಬಂದಿಗೆ ನೀಡಲಾಗುತ್ತಿದ್ದ ವಿಶೇಷ ದರ್ಶನ ಸೌಲಭ್ಯವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಶಿಫಾರಸು ಪತ್ರ ಸ್ವೀಕಾರ ಇಲ್ಲ
ವಿಐಪಿ ಬ್ರೇಕ್ ದರ್ಶನ ರದ್ದಾಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಿಂದ 19ರವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಶಿಫಾರಸು ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ಟಿಟಿಡಿ ತಿಳಿಸಿದೆ. ಭಕ್ತರು ಬದಲಾದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ತಿರುಮಲ ಯಾತ್ರೆಯನ್ನು ಯೋಜಿಸುವಂತೆ ಮನವಿ ಮಾಡಲಾಗಿದೆ.






















