28.5 C
Udupi
Tuesday, October 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 662

ಭರತೇಶ ಶೆಟ್ಟಿ,ಎಕ್ಕಾರು

ನಾರದರು ಇಷ್ಟು ವಿವರವಾಗಿ ಎಲ್ಲವನ್ನು ಹೇಳಿದರೂ ಸತ್ಯಭಾಮಾ ದೇವಿಯ ಮುಖಭಾವದಲ್ಲಿ ಯಾವ ಬದಲಾವಣೆಯೂ ಕಾಣಿಸಲಿಲ್ಲ. ಎಲ್ಲರಿಗೂ ಆಶ್ಚರ್ಯವಾಗುತ್ತಿದೆ. ಆಕೆ ನಾರದರನ್ನು ಕರೆದು “ಪೂಜ್ಯರೆ! ನೀವೇನು ಹೇಳುತ್ತಿರುವಿರೋ ನನಗೊಂದೂ ಅರ್ಥವಾಗುತ್ತಿಲ್ಲ. ನನ್ನವರು ಇಲ್ಲಿ ಒಳಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಸುದೀರ್ಘ ಅಶ್ವಮೇಧ ದಿಗ್ವಿಜಯದಲ್ಲಿ ಪಾರ್ಥನ ಜೊತೆಗಿದ್ದು ಸಾರಥ್ಯ ವಹಿಸಿದ ದಣಿವೋ ಏನೊ! ಆರಾಮ ಬಯಸಿದ್ದಾರೆ. ನನ್ನ ಮಾತಿನ ಮೇಲೆ ವಿಶ್ವಾಸವಿಲ್ಲದಿದ್ದರೆ ನೀವು ಹೋಗಿ ನೋಡಿ. ಆದರೆ ಒಂದು ವಿನಂತಿ ಸದ್ದು ಮಾಡಿ ನಿದ್ರಿಸುತ್ತಿರುವ ಅವರನ್ನು ಎಚ್ಚರಿಸದಿರಿ. ನನ್ನ ದೇವರು ಮಲಗಿರುವ ಕಾರಣ ನಾನು ಎಲ್ಲೂ ಹೋಗದೆ ಇಲ್ಲಿಯೆ ಇದ್ದು ಅವರಿಗಾಗಿ ಕಾಯುತ್ತಿದ್ದೇನೆ. ಅವರು ಎದ್ದ ಬಳಿಕ ಜೊತೆಯಾಗಿ ಯಾಗಶಾಲೆಗೆ ಬರುತ್ತೇವೆ” ಎಂದು ಸತ್ಯಭಾಮಾ ದೇವಿ ನುಡಿದಾಗ ಎಲ್ಲರಿಗೂ ಆಶ್ಚರ್ಯ. ಎಲ್ಲರೂ ಸದ್ದು ಮಾಡದೆ ಒಬ್ಬೊಬ್ಬರಾಗಿ ಹೋಗಿ ನೋಡಿದರೆ ಶ್ರೀಕೃಷ್ಣ ಪರಮಾತ್ಮ ಮಲಗಿ ಸುಖನಿದ್ರೆಯಲ್ಲಿದ್ದಾರೆ. ಅರೆ ಏನಿದು ಆಶ್ಚರ್ಯ! ರುಕ್ಮಿಣಿ ಸಹಿತ ಕೃಷ್ಣ ದೇವ ಗಂಗಾತೀರಕ್ಕೆ ಹೋದುದನ್ನು ನಾವು ಕಣ್ಣಾರೆ ನೋಡಿದವರು. ಇಲ್ಲಿ ನೋಡಿದರೆ ಒಳಗೆ ಮಲಗಿದ್ದಾರೆ! ನಾರದರು ನಸು ನಗುತ್ತಾ “ನಾರಾಯಣ”… “ನಾರಾಯಣ…” ಎಂದು ಹೇಳುತ್ತಾ ಸತ್ಯಭಾಮೆಗೆ ವಂದಿಸಿ ಅಲ್ಲಿಂದ ಹೊರಬಂದರು.

ರಾಜಕುಮಾರರು ಹಿಂಬಾಲಿಸುತ್ತಿದ್ದಾರೆ. ನಾರದ ಮಹರ್ಷಿ ಅಲ್ಲಿಂದ ನೇರವಾಗಿ ಶ್ರೀಕೃಷ್ಣನ ಇನ್ನೋರ್ವ ಪತ್ನಿ ಜಾಂಬವತಿಯ ಅಂತಃಪುರಕ್ಕೆ ಬಂದು ಬಿಟ್ಟರು. ಅಲ್ಲೂ ಇದೇ ರೀತಿ ದಂಪತಿ ಕಲಶಾಭಿಷೇಕಕ್ಕೆ ಶ್ರೀಕೃಷ್ಣ ರುಕ್ಮಿಣಿ ದೇವಿಯ ಜೊತೆ ಗಂಗಾತೀರಕ್ಕೆ ಹೋಗಿರುವ ವಿಚಾರ ಹೇಳಿದರು. ಆದರೆ ಅಲ್ಲೂ ಆಶ್ಚರ್ಯ ಕಾದಿತ್ತು. ಶ್ರೀಕೃಷ್ಣ ಪರಮಾತ್ಮ ಜಾಂಬವತಿಯ ಕೋಣೆಯೊಳಗೆ ಪಲ್ಲಂಗದಲ್ಲಿ ಪವಡಿಸಿ ಗಾಢ ನಿದ್ರೆಯಲ್ಲಿರುವುದನ್ನು ಕಣ್ಣಾರೆ ಕಂಡರು. ಅಷ್ಟಕ್ಕೆ ಬಿಡದ ನಾರದರು ಕೃಷ್ಣನ ಉಳಿದ ಪತ್ನಿಯರಾದ ಮಿತ್ರವಿಂದೆ, ಸತ್ಯೆ, ಕಾಳಿಂದಿ, ಭದ್ರೆ, ಲಕ್ಷಣಿಯರ ಬಳಿಗೆ ಹೋದಾಗಲೂ ಅಲ್ಲೂ ಇದೇ ರೀತಿ ಶ್ರೀಕೃಷ್ಣ ಮಲಗಿ ನಿದ್ರಿಸುತ್ತಿರುವುದು ಕಾಣ ಸಿಕ್ಕಿತು.

ನಾರದರು “ನಾರಾಯಣ…” “ನಾರಾಯಣ…” ಎನ್ನುತ್ತಾ ರಾಜಕುಮಾರರತ್ತ ನೋಡಿ ಮುಗುಳ್ನಕ್ಕರು. “ನೋಡಿದಿರಾ ವಾಸುದೇವ ಕೃಷ್ಣನ ಲೀಲೆ? ಆತ ಕೇವಲ ಯಾದವ ಗೊಲ್ಲನಷ್ಟೆ ಅಲ್ಲ. ಮಹಿಮಾನ್ವಿತನೂ, ಅಪ್ರಮೇಯನೂ ಆದ ಶ್ರೀಮನ್ನಾರಾಯಣ. ನನಗೋ ಸದಾ ಆತನ ನಾಮಸ್ಮರಣೆಯ ಕಾಯಕ. ಇಂದೇನೋ ವಿಶೇಷ ಭಾಗ್ಯ ಆತನ ಮಹಿಮಾತಿಶಯ ನೋಡುವ ಅವಕಾಶ ದೊರೆತು ಧನ್ಯತೆಯನ್ನು ಮೂಡಿಸಿದೆ. ನನ್ನ ಜೊತೆ ನಿಮಗೂ ಲೀಲಾಮಾನುಷನ ನಾಟಕ ನೋಡುವ ಯೋಗ ಸಿಕ್ಕಿದ್ದು ಸೌಭಾಗ್ಯವೇ ಹೌದು” ಎಂದರು. ರಾಜಪುತ್ರರು ಅಡಿಗಡಿಗೆ ಶ್ರೀಹರಿಗೆ ವಂದಿಸುತ್ತಾ, ಭಗವಂತನ ಮಹಿಮೆ ಕೊಂಡಾಡುತ್ತಾ ಯಾಗಮಂಟಪದತ್ತ ಬಂದರು.

ಯಾಗಶಾಲೆಗೆ ಬಂದರೆ, ಅಲ್ಲಿ ವಾದ್ಯಘೋಷಗಳೊಂದಿಗೆ, ಸುಮಂಗಲೆಯರ ಪುಷ್ಪಾರ್ಚನೆಯ ಜೊತೆ ದಂಪತಿಗಳ ಕಲಶದ ಮೆರವಣಿಗೆ ವಿಜ್ರಂಭಣೆ, ಸಡಗರಯುತವಾಗಿ ಗಂಗಾ ತೀರದಿಂದ ಯಾಗ ಮಂಟಪಕ್ಕೆ ಸಾಗಿ ಬರುತ್ತಿದೆ. ಕಣ್ಣರಳಿಸಿ ನೋಡಿದರೆ ಶ್ರೀಕೃಷ್ಣ ರುಕ್ಮಿಯರು ದಂಪತಿ ಶೋಭಾಯಾತ್ರೆಯಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿ ಸಾಗಿ ಬರುತ್ತಿದ್ದಾರೆ. ನಾರದರು ಶ್ರೀಕೃಷ್ಣ ಪರಮಾತ್ಮನನ್ನು ನೋಡಿ “ನಾರಾಯಣ… ನಾರಾಯಣ…” ಎಂದು ನಾಮ ಸ್ಮರಿಸುತ್ತಾ ಮಂದಸ್ಮಿತರಾದರು. ವಾಸುದೇವ ಶ್ರೀಕೃಷ್ಣನೂ ತನ್ನ ಭಕ್ತಾಗ್ರೇಸರನನ್ನು ಕಂಡು ತುಟಿಯಂಚಿನಲ್ಲಿ ಕುಡಿನಗು ಬೀರಿದನು. ದೇವಭಕ್ತರು ನಗುವಲ್ಲೇ ಅದೇನು ಸಂಭಾಷಣೆ ಮಾಡಿಕೊಂಡರೋ! ಅವರಿಬ್ಬರಿಗಷ್ಟೆ ವೇದ್ಯ. ಸಡಗರದ ದಂಪತಿಕಲಶ ಮೆರವಣಿಗೆ ಯಾಗಶಾಲೆ ತಲುಪಿತು. ವಾದ್ಯಗಳ ನಿನಾದ ಮೀರಿಸುವಷ್ಟು ವೇದಘೋಷ ಋಷಿ ಮುನಿ, ವಿಪ್ರ ಸ್ತೋಮದಿಂದ ದಶದಿಕ್ಕುಗಳಿಗೂ ವ್ಯಾಪಿಸುವಂತೆ ಕೇಳಿಸುತ್ತಿದೆ. ದಂಪತಿಗಳು ಪಾವನ ಗಂಗೆಯಿಂದ ಸ್ವರ್ಣ ಕಲಶದಲ್ಲಿ ತುಂಬಿಸಿ ತಂದ ಪವಿತ್ರ ಜಲವನ್ನು ಸರತಿಯಲ್ಲಿ ಕ್ರಮದಂತೆ ಧರ್ಮರಾಯನಿಗೆ ಅಭಿಷೇಕ ಮಾಡಿದರು.

ಇದಾದ ಬಳಿಕ ಯಾಗ ಮುಂದುವರಿದು ವೈಶ್ವಾನರ (ಯಾಗಾಗ್ನಿ) ಪ್ರಜ್ವಲಿಸುತ್ತಾ ಸಮರ್ಪಿಸಿದ ಹವಿರ್ಭಾಗಗಳನ್ನು ಅಧಿದೇವತೆಗಳಿಗೆ ಹವ್ಯವಾಹನನಾಗಿ ತಲುಪಿಸುತ್ತಿದ್ದಾನೋ ಎಂಬಂತೆ ಗಗನಮುಖಿಯಾಗಿ ಜ್ವಾಜಾಲ್ಯಮಾನನಾಗಿ ಪ್ರಜ್ವಲಿಸತೊಡಗಿದ್ದಾನೆ.

ಹೀಗೆ ವಿಧಿವತ್ತಾಗಿ ಬಹಳಷ್ಟು ಯಾಗ ಯಜ್ಞಗಳು ನಡೆದವು. ನಂತರ ಧೌಮ್ಯರು ಯೂಪಸ್ಥಂಭದತ್ತ ಬಂದರು. ಅಶ್ವಮೇಧ ಯಾಗದ ದಿಗ್ವಿಜಯ ಯಾತ್ರೆಯಲ್ಲಿ ಒಂದು ಸಂವತ್ಸರ ಕಾಲ ತಿರುಗಾಡಿದ್ದ ದಿವ್ಯಾಶ್ವಕ್ಕೆ ಮಂತ್ರೋದಕವನ್ನು ಪ್ರೋಕ್ಷಿಸಿ, ಅಕ್ಷತೆಗಳನ್ನು ಅಭಿಮಂತ್ರಿಸಿ ಅರ್ಚಿಸಿದರು. ನಂತರ ಸಂಪ್ರಾರ್ಥನೆಯ ರೂಪದಲ್ಲಿ ಯಾಗಾಶ್ವವನ್ನು ಉದ್ದೇಶಿಸಿ “ಅಯ್ಯಾ ತುರುಗವೇ! ನೀನು ಪಶುವಾಗಿ ಜನಿಸಿದರೂ ದಿವ್ಯವಾದ ಯೋಗಸಂಪನ್ನನಾಗಿರುವೆ. ಯಾಗಾಶ್ವವಾಗಿ ದಿಗ್ವಿಜಯ ಯಾತ್ರೆ ಪೂರೈಸಿ ಮಾನ ಸಮ್ಮಾನಗಳಿಂದ ಮರಳಿ ಬರುವ ಸುಯೋಗ ನಿನ್ನದ್ದಾಗಿತ್ತು. ಸಕಲಾಂಗಗಳನ್ನೂ ಆಭರಣ ಭೂಷಣಗಳಿಂದ ಅಲಂಕರಿಸಿ, ರಾಜ ಮರ್ಯಾದೆಯ ಲಾಂಛನ ನೀನಾಗಿ ತಿರುಗವ ಭಾಗ್ಯ, ರಾಜ ಸೇವಕರಿಂದ ಸೇವೆ ಪಡೆಯುವ, ಆರ್ಯಾವರ್ತದ ಅರಸರ ಎದುರು ರಾಜಮುದ್ರೆಯಂತೆ ಶೋಭಿಸುವ, ಜಯದ್ಯೋತಕವಾಗಿ ಮರಳಿ ಬರುವ ಭಾಗ್ಯ ನಿನಗೊದಗಿ ಬಂದದ್ದು ನಿನ್ನ ಸುಕೃತ ಪುಣ್ಯಫಲವೇ ಸರಿ. ಈಗ ಯಾಗಾಂತ್ಯ ಕಾಲದಲ್ಲಿ ಮೇಧ (ವಧೆ)ಕ್ಕೊಳಗಾಗಿ ಅಧ್ವರದ ಪಶುವಾಗಿ ಸ್ವರ್ಗದಲ್ಲಿ ಉತ್ತಮೋತ್ತಮ ಗತಿಯನ್ನು ಪಡೆಯಲಿರುವೆ. ನಿನ್ನ ಜನ್ಮ ಪಾವನವಾಗಿ ಸಾರ್ಥಕವಾಗಲಿದೆ” ಎಂದು ನುಡಿದು ಅದರ ಅಪ್ಪಣೆ ಬೇಡಿದರು. ಆಗ ಯಾಗಾಶ್ವ ಶ್ರೀಕೃಷ್ಣನತ್ತ ತಿರುಗಿ ಆತನನ್ನು ನೋಡುತ್ತಾ, ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸಿ “ಬೇಡ” ಎಂಬಂತೆ ಸಂಜ್ಞೆ ಮಾಡಿ ಹೇಷಿಸಿತು. (ಹೇಷ = ಕುದುರೆ ಕೂಗುವ ಧ್ವನಿ. ಉದಾ: ನಾಯಿಯ ಧ್ವನಿ = ಬೊಗಳುವುದು). ಇದನ್ನು ನೋಡುತ್ತಿದ್ದ ಶ್ರೀಕೃಷ್ಣ ಕುದುರೆ ಏನೋ ಬೇಡಿಕೊಳ್ಳುತ್ತಿದೆ ಎಂದು ಅರ್ಥೈಸಿಕೊಂಡನು. ಕೂಡಲೆ ನಕುಲನನ್ನು ಬಳಿ ಕರೆದು “ಅಯ್ಯಾ! ನಮ್ಮ ಯಾಗಾಶ್ವ ಏನೋ ಹೇಳುತ್ತಿದೆ. ನಿನಗೆ ಪ್ರಾಣಿಗಳ ಭಾಷೆ ಅರ್ಥವಾಗುತ್ತದೆಯಲ್ಲವೆ? ದಯಮಾಡಿ ಅದೇನು ಹೇಳುತ್ತಿದೆಯೆಂದು ನಮಗೆ ತಿಳಿಸಬಹುದೇ?” ಎಂದು ಕೇಳಿಕೊಂಡನು.

ಮುಂದುವರಿಯುವುದು…..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page