
ಬೆಂಗಳೂರು: ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಇದೀಗ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು ಈ ಕುರಿತು Veerashaiva Lingayath Official ಪೇಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
‘ಮೂರು ಸಾವಿರ ಮಠವಿದೆಯೋ, ಆರು ಸಾವಿರ ಮಠವಿದೆಯೋ… ನೀವೆಲ್ಲ ನನ್ನ ರಾಯಭಾರಿಗಳಾಗಿ ಸೇವೆ ಮಾಡಿ ಮುಕ್ತಿ ಪಡೆಯಿರಿ. ಆವಾಗಷ್ಟೇ ನಿಮಗೆ ಶಾಂತಿ ನಿಮ್ಮ ಅಭಿವೃದ್ಧಿ’ ಎಂದು ಸಿಎಂ ಹೇಳಿದಾಗ ವೇದಿಕೆಯಲ್ಲಿದ್ದ ಪಂಚಪೀಠಾಧೀಶರು ಯಾವುದೇ ವಿರೋಧ ವ್ಯಕ್ತಪಡಿಸದೆ ಚಪ್ಪಾಳೆ ತಟ್ಟಿದ್ದು ವಿಷಾದನೀಯ ಎಂದು ಪೇಜ್ ಹೇಳಿದೆ.
ಸಚಿವ ಈಶ್ವರ ಖಂಡ್ರೆ ಹಾಗೂ ವಿಜಯಾನಂದ ಕಾಶಪ್ಪನವರ್ ಧರ್ಮದ ಗೌರವ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಭಾವನೆ ಮೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಈ ಹೇಳಿಕೆಯನ್ನು ಚಲವಾದಿ ನಾರಾಯಣಸ್ವಾಮಿ ಮಾತ್ರ ಖಂಡಿಸಿದ್ದು, ಉತ್ತರಿಸಬೇಕಾದವರು ಮೌನವಾಗಿದ್ದರು ಎಂದು ಟೀಕಿಸಲಾಗಿದೆ.
ಬೇರೆ ಸಮುದಾಯದ ಧಾರ್ಮಿಕ ವಿಚಾರಗಳ ಕುರಿತು ಇಂತಹ ಹೇಳಿಕೆ ಬಂದಿದ್ದರೆ, ಅಲ್ಲಿನ ನಾಯಕರು ತಕ್ಷಣ ಪ್ರತಿಕ್ರಿಯಿಸುತ್ತಿದ್ದರು. ಆದರೆ ನಮ್ಮ ಧರ್ಮದ ಇತಿಹಾಸ, ಪರಂಪರೆ ಹಾಗೂ ನಂಬಿಕೆಗಳ ಬಗ್ಗೆ ಹೇಳಿಕೆ ಬಂದಾಗ ಮೌನ ವಹಿಸುವುದು ದುರ್ದೈವ ಎಂದು ಹೇಳಲಾಗಿದೆ.
ಧರ್ಮದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಧಾರ್ಮಿಕ ಪರಂಪರೆ ಮತ್ತು ಶರಣರ ಇತಿಹಾಸಕ್ಕೆ ಧಕ್ಕೆ ಬಂದಾಗ ಪಕ್ಷಾತೀತವಾಗಿ ಧ್ವನಿ ಎತ್ತುವ ಧೈರ್ಯ ನಾಯಕರು ತೋರಬೇಕು. ಇದು ವ್ಯಕ್ತಿಯ ವಿರುದ್ಧದ ವಿರೋಧವಲ್ಲ, ಧರ್ಮದ ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆ ಎಂದು Veerashaiva Lingayath Official ಪೇಜ್ ತಿಳಿಸಿದೆ.





















