ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ವೈದ್ಯರಿಗೆ ನೋಟಿಸ್

ಬೆಂಗಳೂರು: ಬಿಡದಿಯ ದೊಡ್ಡೇರಿ ಫಾರ್ಮ್ ಹೌಸ್ನಲ್ಲಿ ತಯಾರಾಗುತ್ತಿದ್ದ ನಕಲಿ ಔಷಧಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳಿಗೆ ಪೂರೈಸಲಾಗುತ್ತಿತ್ತು ಎಂಬುದು ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಔಷಧ ಖರೀದಿಸಿದ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ವೈದ್ಯರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಆರೋಪಿಗಳು ಬಹುರಾಷ್ಟ್ರೀಯ ಫೈಜರ್ ಸೇರಿದಂತೆ ಎರಡು ಕಂಪನಿಗಳ ಹೆಸರಿನಲ್ಲಿ ನಕಲಿ ಔಷಧ ತಯಾರಿಸುತ್ತಿದ್ದರು ಎನ್ನಲಾಗಿದೆ. ವಿವಿಧ ರಾಜ್ಯಗಳಿಂದ ಕಚ್ಚಾ ಸಾಮಗ್ರಿಗಳನ್ನು ಫಾರ್ಮ್ ಹೌಸ್ಗೆ ತರಿಸಿ, ಅಸಲಿ ಔಷಧದೊಂದಿಗೆ ನಕಲಿ ಔಷಧ ಬೆರೆಸಿ ಮರುಪ್ಯಾಕಿಂಗ್ ಮಾಡಲಾಗುತ್ತಿತ್ತು. ಬಳಿಕ ಲೇಬಲ್ ಅಂಟಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳಿಗೆ ಪೂರೈಸಲಾಗುತ್ತಿತ್ತು.
ವೈದ್ಯರ ಪಾತ್ರದ ಬಗ್ಗೆಯೂ ತನಿಖೆ: ನಕಲಿ ಔಷಧ ಖರೀದಿಸಿದ್ದ ಆಸ್ಪತ್ರೆಗಳ ಪಟ್ಟಿಯನ್ನು ಎಸ್ಐಟಿ ಸಿದ್ಧಪಡಿಸಿದೆ. ವಶಪಡಿಸಿಕೊಂಡ ಅಸಲಿ ಮತ್ತು ನಕಲಿ ಔಷಧಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಯಾವ ಆಸ್ಪತ್ರೆಗಳು ಅವುಗಳನ್ನು ಖರೀದಿಸಿದ್ದವು ಎಂಬುದು ಸ್ಪಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ನಕಲಿ ಔಷಧ ಎಂಬುದು ತಿಳಿದಿದ್ದರೂ ಕಡಿಮೆ ದರಕ್ಕೆ ಖರೀದಿಸಿ ರೋಗಿಗಳ ಚಿಕಿತ್ಸೆಗೆ ಬಳಸಲಾಗಿತ್ತೇ ಎಂಬುದನ್ನೂ ತನಿಖೆ ನಡೆಸಲಾಗುತ್ತಿದೆ. ಖರೀದಿ ವೇಳೆ ನಿಯಮ ಉಲ್ಲಂಘನೆಯಾಗಿದ್ದರೆ ಹಾಗೂ ಗೊತ್ತಿದ್ದೇ ನಕಲಿ ಔಷಧ ಪಡೆದಿರುವುದು ದೃಢಪಟ್ಟರೆ ಆಸ್ಪತ್ರೆಗಳ ಆಡಳಿತ ಮಂಡಳಿ ಮತ್ತು ಸಂಬಂಧಿಸಿದ ವೈದ್ಯರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಎಸ್ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ದೊಡ್ಡೇರಿ ಫಾರ್ಮ್ ಹೌಸ್ನ್ನೇ ದಂಧೆಯ ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ವಿವಿಧ ರಾಜ್ಯಗಳಿಂದ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಅಸಲಿ ಔಷಧಗಳನ್ನು ತರಿಸಿ, ಮರುಪ್ಯಾಕಿಂಗ್ ಮಾಡಿ ಟರ್ಕಿಯಿಂದ ತರಿಸಲಾದ ಲೇಬಲ್ಗಳನ್ನು ಅಂಟಿಸಿ ಆಸ್ಪತ್ರೆಗಳಿಗೆ ಪೂರೈಸುತ್ತಿದ್ದರು ಎನ್ನಲಾಗಿದೆ. ಈ ಪ್ರಕರಣದ ತನಿಖೆಗಾಗಿ ತಂಡಗಳು ಎಂಟು ರಾಜ್ಯಗಳಿಗೆ ತೆರಳಿ ಪರಿಶೀಲನೆ ನಡೆಸಿವೆ.
ಫೈಜರ್ ಕಂಪನಿಯವರ ವಿಚಾರಣೆ: ಫೈಜರ್ ಹೆಸರಿನಲ್ಲಿ ನಕಲಿ ಔಷಧ ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಹಾಗೂ ಇಟಲಿಯಲ್ಲಿರುವ ಕಂಪನಿಗೆ ಪತ್ರ ಕಳುಹಿಸಲಾಗಿತ್ತು. ಕಂಪನಿಗೆ ಸೇರಿದ ಕೆಲ ಗೋದಾಮುಗಳ ಮೇಲೆ ದಾಳಿ ನಡೆಸಿ ದಾಖಲೆ ಸಂಗ್ರಹಿಸಿದ ಬಳಿಕ ತನಿಖೆಗೆ ಸಹಕಾರ ದೊರೆತಿದೆ. ಕಂಪನಿಯ ಪ್ರತಿನಿಧಿಯೊಬ್ಬರನ್ನು ಒಂದು ವಾರ ವಿಚಾರಣೆ ನಡೆಸಲಾಗಿದ್ದು, ದಂಧೆಯಲ್ಲಿ ಕಂಪನಿಯ ಪಾತ್ರವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಕಲಿ ಔಷಧ ಸೇವಿಸಿ ಚಿಕಿತ್ಸೆಗೆ ತೊಂದರೆಗೊಳಗಾದ ಅಥವಾ ಮೃತಪಟ್ಟಿರುವ ರೋಗಿಗಳ ಮಾಹಿತಿಯನ್ನೂ ಎಸ್ಐಟಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಹೊರ ರಾಜ್ಯಕ್ಕೂ ವಿಸ್ತರಿಸಿದ್ದ ಜಾಲ
ಅಜರ್ಬೈಜಾನ್ನಲ್ಲಿ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಬಾಬು ರಾಜ್ (35)ನನ್ನು ಬಂಧಿಸಿರುವ ಎಸ್ಐಟಿ, ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದೆ.
ಚಾಮರಾಜಪೇಟೆಯ ಕೃಪಾ ಫಾರ್ಮಾದ ವೀರೇಶ್ ಹಾಗೂ ಪ್ರಶಾಂತ್ ಬಾಬು ಸೇರಿಕೊಂಡು ನಕಲಿ ಔಷಧ ದಂಧೆ ಆರಂಭಿಸಿದ್ದರು ಎನ್ನಲಾಗಿದೆ. ಮೊದಲಿಗೆ ಕಮರ್ಷಿಯಲ್ ಸ್ಟ್ರೀಟ್ ಹಾಗೂ ಚಾಮರಾಜಪೇಟೆ ವ್ಯಾಪ್ತಿಯ ಆಸ್ಪತ್ರೆ-ಕ್ಲಿನಿಕ್ಗಳಿಗೆ ಔಷಧ ಪೂರೈಸಿ, ಬಳಿಕ ಹೊರ ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೂ ಜಾಲ ವಿಸ್ತರಿಸಿದ್ದರು.
ವಿವಿಧ ಹೆಸರಿನಲ್ಲಿ ಕಂಪನಿಗಳನ್ನು ನೋಂದಾಯಿಸಿ ಜಿಎಸ್ಟಿ ಸಂಖ್ಯೆಯನ್ನೂ ಪಡೆದಿದ್ದರು. ತಯಾರಿಸಿದ ನಕಲಿ ಔಷಧಗಳನ್ನು ಪ್ರತಿಷ್ಠಿತ ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್ಗಳಿಗೆ ಪೂರೈಸುವ ಜವಾಬ್ದಾರಿಯನ್ನು ವೀರೇಶ್ ನಿರ್ವಹಿಸುತ್ತಿದ್ದರೆ, ಇಡೀ ಜಾಲವನ್ನು ಪ್ರಶಾಂತ್ ಬಾಬು ನಿಯಂತ್ರಿಸುತ್ತಿದ್ದ ಎನ್ನಲಾಗಿದೆ.
ಎಸ್ಐಟಿ ತನಿಖೆಯಲ್ಲಿ ಇದುವರೆಗೆ ಆರೋಪಿಗಳು ಸುಮಾರು ₹ 20 ಕೋಟಿ ವಹಿವಾಟು ನಡೆಸಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

























































































