
ಕಾರ್ಕಳದ ಹಿರಿಯಂಗಡಿಯ ಶ್ರೀ ಭುಜಬಲಿ ಬ್ರಹ್ಮಚರ್ಯ ಆಶ್ರಮದಲ್ಲಿ ಜೈನರ ಪವಿತ್ರ ಪರ್ವ ದಶಲಕ್ಷಣ ಪರ್ವದ ಆಚರಣೆ
ಕಾರ್ಕಳದ ಹಿರಿಯಂಗಡಿಯ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಿನಾಂಕ 16.09.2026 ನೇ ಬುಧವಾರದಿಂದ 25.09.2026 ರ ಶುಕ್ರವಾರದವರೆಗೆ ಪರಮಪೂಜ್ಯ ಏಲಾಚಾರ್ಯ 108 ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ಮತ್ತು ಪರಮ ಪೂಜ್ಯ 108 ಶ್ರೀ ಮಹಿಮಾಸಾಗರ ಮುನಿಮಹಾರಾಜರ ಆಶೀರ್ವಾದಪೂರ್ವಕ ಕಾರ್ಕಳ ಶ್ರೀ ಜೈನ ಮಠದ ರಾಜಗುರು ಧ್ಯಾನಯೋಗಿ ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ದಶಲಕ್ಷಣ ಪರ್ವವನ್ನು ಶ್ರದ್ಧಾ ಭಕ್ತಿಯಿಂದ ಪ್ರತಿವರ್ಷದಂತೆ ಆಚರಿಸಲಾಯಿತು.
ದಿನಾಂಕ 16.09.2026 ರಂದು ಉತ್ತಮ ಕ್ಷಮಾ ಧರ್ಮದಂದು ಮೂಡಬಿದ್ರೆಯ ವಕೀಲರಾದ ಶ್ರೀಮತಿ ಶ್ವೇತಾ ಜೈನ್, ಆಶ್ರಮದ ಆಡಳಿತ ಮಂಡಳಿ ಸದಸ್ಯರಾದ ಅಶೋಕ್ ಕುಮಾರ್ ಬಲ್ಲಾಳ್, ಸಿಎ ಪ್ರಭಾತ್ ಕುಮಾರ್, ಹಿರಿಯರಾದ ಭರತ್ ರಾಜ್ ಇಂದ್ರ, ಗುರುಗಳಾದ ಯೋಗರಾಜ್ ಶಾಸ್ತ್ರಿ ಮೊದಲಾದವರು ದೀಪ ಬೆಳಗಿಸುವ ಮೂಲಕ ಹತ್ತು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರತಿ ದಿನ ಸಂಜೆ ಗಂಟೆ 6 ರಿಂದ ಶ್ರೀ ಜಿನ ಭಗವಂತನ ಪೂಜೆ, ಭಜನೆ, ಮಹಾಮಂಗಳಾರತಿ, ವಿದ್ವಾಂಸರಿಂದ ಉಪನ್ಯಾಸ, ತತ್ವಾರ್ಥ ಸೂತ್ರ ವಾಚನ, ವಿದ್ಯಾರ್ಥಿಗಳಿಂದ ಭಾಷಣ ಮುಂತಾದ ಕಾರ್ಯಕ್ರಮಗಳು ನಡೆದವು.
ದಿನಾಂಕ 25.09.2026 ಶುಕ್ರವಾರ ಉತ್ತಮ ಬ್ರಹ್ಮಚರ್ಯ ಧರ್ಮದ ಆಚರಣೆಯಂದು ಆಶ್ರಮದ ಕಾರ್ಯದರ್ಶಿಗಳಾದ ಎಸ್ ಅನಂತರಾಜ್ ಪೂವಣಿ ಇವರ ಅಧ್ಯಕ್ಷತೆಯಲ್ಲಿ, ಉಪನ್ಯಾಸಕರಾದ ಮಹಾವೀರ್ ಜೈನ್ ಇಜಿಲಂಪಾಡಿ ಮತ್ತು ಆಶ್ರಮದ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಕೆ.ಶಶಿಕಾಂತ ಆರಿಗ ಇವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಆರಂಭದಲ್ಲಿ ಧಾರ್ಮಿಕ ಗುರುಗಳಾದ ಯೋಗರಾಜ್ ಶಾಸ್ತ್ರಿಯವರು ಸ್ವಾಗತಿಸಿದರು. ದಶಲಕ್ಷಣ ಪರ್ವದ ಪ್ರಯುಕ್ತ ನಡೆಸಿದ ಧಾರ್ಮಿಕ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಆಶ್ರಮದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಳೆದ ಸಾಲಿನ 7 ನೇ ತರಗತಿ , 10 ನೇ ತರಗತಿ ಮತ್ತು ಪಿಯುಸಿ ತರಗತಿಗಳ ಅಂತಿಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೊದಲ ಇಬ್ಬರು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಅದೇ ರೀತಿ ಆಶ್ರಮದ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಬಿ. ಭರತ್ ರಾಜ್ ಅವರು ಇಬ್ಬರು ಮಕ್ಕಳಿಗೆ ಭೋಜನ ಶುಲ್ಕದ ಮೊತ್ತವನ್ನು ದಾನವಾಗಿ ನೀಡಿದರು. ಹಿರಿಯಂಗಡಿಯ ಕೀರ್ತಿ ಶೇಷ ಕೆ ನಾಗಕುಮಾರ್ ಇಂದ್ರ ಇವರ ಸ್ಮರಣಾರ್ಥ ಶ್ರೀಯುತರ ಕುಟುಂಬಸ್ಥರಿಂದ ಆಶ್ರಮದ ಮೂವರು ಮಕ್ಕಳಿಗೆ ಔಷಧದಾನ ಮಾಡಿದರು.
ಪರ್ವದ ಹತ್ತು ದಿನಗಳ ಕಾಲ ಪೂಜಾ ವೆಚ್ಚ, ವಿದ್ಯುದ್ದೀಪಾಲಂಕಾರ ವೆಚ್ಚ, ಮುದ್ರಣ ವೆಚ್ಚ, ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ, ಉಪಹಾರ ಮತ್ತು ವಿಶೇಷ ಭೋಜನದ ವ್ಯವಸ್ಥೆ ಹಾಗೂ ಸಂಸ್ಥೆಗೆ ಧನ ಸಹಾಯ ಮಾಡಿದ ಎಲ್ಲಾ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.
ವಿದ್ಯಾರ್ಥಿ ಭುವನ್ ಜೈನ್ ಪ್ರಾರ್ಥಿಸಿದರು. ಅನ್ವಿತ್ ಜೈನ್ ವರದಿ ಮಂಡಿಸಿದರು. ಪ್ರೀತಮ್ ಜೈನ್ ವಿದ್ಯಾರ್ಥಿ ಭಾಷಣ ಮಾಡಿದರು. ತೀರ್ಥನ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಗುರುಗಳಾದ ಶ್ರೀ ವೀರೇಂದ್ರ ಜೈನ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವು ಜಾಪ್ಯ ಮಂತ್ರ ಮತ್ತು ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಯಿತು.































































































































