ಮನೆಗೆ ನುಗ್ಗಿ ₹1 ಕೋಟಿ ಮೌಲ್ಯದ ಚಿನ್ನಾಭರಣ ಕಳವು

ನಾಗರ್ಕೋಯಿಲ್: ಸಾಮಾಜಿಕ ಜಾಲತಾಣಗಳಲ್ಲಿ ಮನೆಯಲ್ಲಿರುವ ಚಿನ್ನಾಭರಣ ಹಾಗೂ ನಗದಿನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಯೂಟ್ಯೂಬರ್ ಅವರ ಮನೆಯಲ್ಲಿ ಸುಮಾರು ₹1 ಕೋಟಿ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ.
ತಮ್ಮತ್ತೂಕೋಣಂನ ವಿಐಪಿ ಗಾರ್ಡನ್ನಲ್ಲಿ ವಾಸಿಸುವ ಉದ್ಯಮಿ ವಿನೋದ್ ಕುಮಾರ್ ಅವರ ಪತ್ನಿ ಮಧುಮಿತಾ, ಮನೆಯಲ್ಲಿ ಇಟ್ಟಿದ್ದ ಚಿನ್ನ ಹಾಗೂ ನಗದನ್ನು ರೀಲ್ಸ್ ಮೂಲಕ ಪ್ರದರ್ಶಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ತಾವು ಎಲ್ಲಿಗೆ ತೆರಳುತ್ತಿದ್ದೇವೆ ಎಂಬ ಮಾಹಿತಿಯನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈ ಮಾಹಿತಿ ಆಧರಿಸಿ ಮನೆಯವರು ಹೊರಗೆ ಹೋಗಿರುವುದನ್ನು ತಿಳಿದುಕೊಂಡಿದ್ದ ಕಳ್ಳರು, ಮನೆಯ ಹಿಂಭಾಗದ ಬಾಗಿಲು ಒಡೆದು ಒಳನುಗ್ಗಿದ್ದಾರೆ. ಬಳಿಕ ಪೂಜಾ ಕೊಠಡಿಯಲ್ಲಿದ್ದ ಸುಮಾರು 120 ಪವನ್ ಚಿನ್ನಾಭರಣವನ್ನು ಕಳವು ಮಾಡಿದ್ದು, ಇದರ ಮೌಲ್ಯ ಸುಮಾರು ₹1 ಕೋಟಿ ಎಂದು ತಿಳಿದುಬಂದಿದೆ.
ರಾಜಕ್ಕಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್ ನೆಟ್ವರ್ಕ್ ದಾಖಲೆಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಮಧುಮಿತಾ ಅವರ ಪತಿ ಏಲಕ್ಕಿ ಉದ್ಯಮಿಯಾಗಿದ್ದು, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದಿನ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದೇ ಕಳ್ಳತನಕ್ಕೆ ಕಾರಣವಾಗಿರಬಹುದು ಎಂದು ವರದಿಯಾಗಿದೆ. ಇದೇ ರೀತಿಯ ಪ್ರಕರಣವೊಂದು ಕಳೆದ ಜೂನ್ನಲ್ಲಿ ಮಧ್ಯಪ್ರದೇಶದಲ್ಲೂ ನಡೆದಿತ್ತು.































































































































