
ಮಂಗಳೂರು: ಕರಾವಳಿ ನಗರ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಬಿಬಿಎ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ಸೀನಿಯರ್ಗಳು ಭೀಕರ ರ್ಯಾಗಿಂಗ್ ನಡೆಸಿ, ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಘಟನೆ ಹಿನ್ನೆಲೆ:
ಸೆಪ್ಟೆಂಬರ್ 19ರಂದು ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದ ಅಮೀರ್ ಅಲಿ ಹಾಗೂ ಮೊಹಮ್ಮದ್ ಅಲ್ಫಾಜ್ ಕಾಲೇಜಿನ ಹೊರಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸೀನಿಯರ್ಗಳ ಗುಂಪೊಂದು ಬೈಕ್ಗಳಲ್ಲಿ ಬಂದು ಅವರನ್ನು ಬಲವಂತವಾಗಿ ಕರೆದೊಯ್ದಿದೆ ಎನ್ನಲಾಗಿದೆ. ಬಳಿಕ ಇಬ್ಬರನ್ನೂ ನಿರ್ಜನ ಮನೆಯೊಂದರ ಕೊಠಡಿಯಲ್ಲಿ ಬಂಧಿಸಿ, ಬಟ್ಟೆ ಬಿಚ್ಚಿಸಿ ಬೆಲ್ಟ್, ಹ್ಯಾಂಗರ್ ಹಾಗೂ ಕೈಗಳಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಿಂದ ಬಳಲಿದ ವಿದ್ಯಾರ್ಥಿಗಳು ನೀರು ಕೇಳಿದಾಗ ಕಲುಷಿತ ನೀರು ನೀಡಲಾಗಿದ್ದು, ಅದನ್ನು ಕುಡಿಯಲು ನಿರಾಕರಿಸಿದಾಗ ಮೈಮೇಲೆ ಸುರಿದು ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇಡೀ ಘಟನೆಯನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಧ್ಯಾಹ್ನದಿಂದ ಸಂಜೆ 6 ಗಂಟೆಯವರೆಗೆ ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಇರಿಸಿ ದೌರ್ಜನ್ಯ ನಡೆಸಿದ ಬಳಿಕ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಚಾಕುವಿನಿಂದ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತರಗತಿಗೆ ಬರುವಾಗ ಕ್ಲೀನ್ ಶೇವ್ ಮಾಡಿಕೊಂಡು ಬರಬೇಕು ಹಾಗೂ ಶೂ ಧರಿಸಬಾರದು ಎಂಬ ನಿಯಮವನ್ನೂ ಹೇರಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಿಂದ ಭಯಗೊಂಡ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ್ದು, ಅವರ ಸಲಹೆಯಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕೊಲೆ ಯತ್ನ, ಅಪಹರಣ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯ ರ್ಯಾಗಿಂಗ್ ವಿರೋಧಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
9 ಮಂದಿ ವಿರುದ್ಧ ಪ್ರಕರಣ
ನಾಸೀದ್ ಅಮೀರ್, ಆದಿಲ್ ಎಂ., ಅರ್ಶಕ್, ಅನೀಶ್, ಉವೈಸ್, ರೋಹನ್ ರಮೇಶ್, ಆದಿಲ್ ವಿ.ಪಿ., ರೆಹಾನ್ ಎಂ.ಪಿ. ಹಾಗೂ ಶಿನಾಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ.































































































































