ಭಾಗ – 649
ಭರತೇಶ ಶೆಟ್ಟಿ ,ಎಕ್ಕಾರು

ದೋಣಿ ಸಾಗುತ್ತಿತ್ತು – ನದಿ ಹರಿಯುತ್ತಿತ್ತು -ತಂಗಾಳಿ ಬೀಸುತ್ತಿತ್ತು, ಸುಂಗಂಧ ಪರಿಮಳಿಸುತ್ತಿತ್ತು- ಈ ಕ್ರಿಯೆಗಳ ಮಧ್ಯೆ ದಯೆತೋರಿದ ಮುನಿಪೋತ್ತಮರ ಯಾವುದೋ ಸುಪ್ತ ಭಾವ ಬಡಿದೆಬ್ಬಿಸಿ ಕಾಲಿಯ ಮನವೂ ಪ್ರತಿಕ್ರಿಯೆಗೆ ಸ್ಪಂದಿಸಲನುವಾಗುತ್ತಿತ್ತು. ವಿಧ ವಿಧ ಭಾವ ಲಜ್ಜೆಯೋ, ಹರ್ಷವೋ, ಇನ್ನೇನೇನೋ… ಪರಾಶರರು ನೇರವಾಗಿ ತಮ್ಮ ಹೃದಯಭಾವವನ್ನು ಅವಳಲ್ಲಿ ತೋಡಿಕೊಂಡು ಅಭೀಷ್ಟವನ್ನು ಪೂರೈಸಿಕೊಡೆಂದು ಕೇಳಿದಾಗ ಕ ಪ್ರತಿರೋಧ ತೋರದ ಸದ್ಗುಣ ಶೀಲೆ ಸತ್ಯವತಿಯ ಮೌನ ಸಮ್ಮತಿ ಲಕ್ಷಣವೆಂಬಂತೆ ಭಾಸವಾಗುತ್ತಿತ್ತು. ನೋಡ ನೋಡುತ್ತಿದ್ದಂತೆ ಸೂರ್ಯನ ಶಾಖದ ತಾಪ ಅಡಗಿಸಲೋ ಎಂಬಂತೆ ಇವರ ದೋಣಿಯನ್ನು ಸುತ್ತುವರಿದು ಮಂಜಿನ ಪ್ರಾಕಾರ ಗೋಡೆ ಬೆಳೆದು ಮನೆಯಂತೆ ಆವರಿಸಿ ಇವರೀರ್ವರು ದೋಣಿಸಹಿತ ಬಂಧಿಗಳಾದರು. ನದಿ ಮಧ್ಯೆ ದ್ವೀಪವೊಂದು ರಚಿಸಲ್ಪಟ್ಟಿತು. ಈ ಕೃತ್ಯ ಪರಾಶರ ಮಹರ್ಷಿಗಳ ಸಂಕಲ್ಪದಂತೆ ತಪೋ ಬಲ ವಿನಿಯೋಗದಿಂದಾಗಿತ್ತು. ಮಂಜಿನ ಮುಸುಕಿನರಮನೆಯೊಳಗೆ ಪರಾಶರ ಸತ್ಯವತಿ ವಶವರ್ತಿಗಳಾದರು.
ಮಹಿಮಾನ್ವಿತರ ತಪಃಶಕ್ತಿಯ ತೇಜಸ್ಸಿನಿಂದ ಸತ್ಯವತಿ ಗರ್ಭವತಿಯಾಗಿ ಗಂಡು ಮಗುವೊಂದರ ತಾಯಿಯಾದಳು. ಸದ್ಯೋಗರ್ಭ (ಅರೆ ಕ್ಷಣದಲ್ಲಿ ಗರ್ಭ) ಸದ್ಯೋಜಾತತ್ವ (ಸಂಕಲ್ಪದಿಂದಲೇ ಜನನ) ಪರಾಶರರು ಒಂದೇ ಒಂದು ಮುಹೂರ್ತದೊಳಗಾಗಿ ಕರುಣಿಸಿದ್ದರಿಂದ ಹುಟ್ಟಿದ ಮಗು ಒಡನೆ ಬೆಳೆದು ನಡೆಯುವಂತಾಯಿತು. ಮಗುವಿನ ಮೈಬಣ್ಣ ಕಪ್ಪು ವರ್ಣವಿದ್ದದ್ದರಿಂದ “ಕೃಷ್ಣ” ಹಾಗೆಯೇ ದ್ವೀಪದಲ್ಲಿ ಹುಟ್ಟಿದ್ದರಿಂದ “ದ್ವೈಪಾಯನ” ನೆಂತಲೂ ಜತೆ ಸೇರಿಸಿ ” ಕೃಷ್ಣ ದ್ವೈಪಾಯನ” ಎಂಬ ನಾಮಧೇಯವಿತ್ತು ವಿಶೇಷ ತರವಾದ ಸಕಲ ವಿದ್ಯಾ ಸಂಪದವನ್ನೂ, ಅತಿಶಯವಾದ ಜ್ಞಾನ ವನ್ನೂ, ಬ್ರಹ್ಮ ಜ್ಞಾನದ ಗುರೂಪದೇಶವನ್ನೂ ಕರುಣಿಸಿದರು. ಕೃಷ್ಣ ದ್ವೈಪಾಯನರು ಹುಟ್ಟಿನಿಂದಲೇ ವಿಶೇಷ ಮಹಿಮಾನ್ವಿತರಾದರು. ಮಾತಾ ಪಿತೃಗಳಿಗೆ ವಂದಿಸಿ ತಾಯಿಯನ್ನು ಕುರಿತು ” ಮಾತೇ ನಿಮ್ಮ ಆಪತ್ಕಾಲದಲ್ಲಿ ನನ್ನನ್ನು ಸ್ಮರಿಸಿ ತಕ್ಷಣ ನಿಮ್ಮ ಸೇವೆಗೆ ಸಿದ್ಧನಾಗಿ ಬರುತ್ತೇನೆ” ಎಂದು ವಾಗ್ದಾನವಿತ್ತು ಹೊರಟ ಇವರು ಬದರಿಕಾಶ್ರಮ ಸೇರಿದರು. “ಬಾದಾರಾಯನ” ಎಂಬ ನಾಮವಿಶೇಷಣವನ್ನೂ ಹೊಂದಿದರು.
ಕನಸಿನಂತೆ ನಡೆದು ಹೋದ ಘಟನೆಯನ್ನು ಜ್ಞಾಪಿಸಿ ಭಯಗೊಂಡ ಸತ್ಯವತಿ ಚಿಂತೆಗೊಂಡಾಗ ಪರಾಶರರು ಸಮಾಧಾನ ಪಡಿಸಿ ” ಇಲ್ಲೇನು ನಡೆದಿದೆಯೋ ಅದು ರಹಸ್ಯವಾಗಿರಲಿ. ಮುಂದೆ ಕಾಲ ಕೂಡಿ ಬಂದಾಗ ಈ ರಹಸ್ಯ ಬಯಲಾಗಲಿದೆ. ಅಲ್ಲಿಯವರೆಗೆ ಚಿಂತಿಸ ಬೇಡ” ಎಂದು ಸಮಾಧಾನಿಸಿ, ನಿನ್ನ ಚಿಂತೆಗೆ ಕಾರಣ ನಷ್ಟಗೊಂಡಿರುವ ನಿನ್ನ ಕನ್ಯತ್ವ, ಅದು ಯಾವ ತರಹದ ನ್ಯೂನ್ಯತೆಯೂ ಇಲ್ಲದಂತೆ ಪುನರ್ ಪ್ರಾಪ್ತಿಯಾಗುವಂತೆ ಅನುಗ್ರಹಿಸುತ್ತೇನೆ. ಈ ವರೆಗೆ ಮತ್ಸ್ಯಗಂಧಿಯಾಗಿದ್ದ ನೀನು ಇಂದಿನಿಂದ ನಿನ್ನ ಶರೀರದಿಂದ ಸೂಸುವ ಸುಗಂಧ ಯೋಜನಾಂತರದವರೆಗೆ ಹಬ್ಬುವ ಕಾರಣದಿಂದ ಯೋಜನ ಗಂಧಿ ಎಂದು ಪ್ರಸಿದ್ಧಳಾಗು. ನಿನಗೆ ಶ್ರೇಯಸ್ಸಾಗಲಿ ಎಂದು ಆಶೀರ್ವದಿಸಿದರು. ಪರಾಶರ ಮಹರ್ಷಿಗಳು ನದಿಯ ಆ ತೀರ ಸೇರಿದರೆ ಸತ್ಯವತಿ ತಿರುಗಿ ಮನೆ ಸೇರಿದಳು. ಮಗಳ ಶರೀರದ ಕಂಪನ್ನು ಆಗ್ರಾಣಿಸಿ ಅಪ್ಪ ದಾಶರಾಜ ಪ್ರಶ್ನಿಸಿದಾಗ ಮಹಾತ್ಮ ತಪಸ್ವಿಗಳ ಅನುಗ್ರಹ ಎಂದಷ್ಟೇ ಹೇಳಿ ಸಂತಸಪಟ್ಟು, ಏನೂ ನಡದೇ ಇಲ್ಲವೆಂಬಂತೆ ಸತ್ಯವತಿ ಈಗ ಯೋಜನಾಗಂಧಿಯಾದ ಸಂತಸವನ್ನೇ ಬಹಿರ್ಮುಖದಲ್ಲಿ ತೋರುತ್ತಸ ಸುಮ್ಮನಾದಳು. ಕಾಲ ಸಾಗುತ್ತಿತ್ತು…
ಹೀಗಿರಲು ಪರಾಶರ ಪುತ್ರರಾದ ಕೃಷ್ಣ ದೈಪಾಯಾನರು ಬದರಿಕಾಶ್ರಮ ಸೇರಿದವರು ಬಹುಕಾಲ ತಪಸ್ಸನ್ನಾಚರಿಸಿ ಪಿತ್ರಾರ್ಜಿತ ದಿವ್ಯ ಜ್ಞಾನದ ಸರ್ವವನ್ನೂ ಸಿದ್ಧಿಸಿಕೊಂಡು ಬದರಿಕಾಶ್ರಮದವರಾದ ಬಾದರಾಯಣ ರೆಂದು ಕರೆಸಿಕೊಂಡರು.
ಹೀಗೆ ತಪಃ ನಿಷ್ಟರಾಗಿಯೂ ಶಿಷ್ಯೋತ್ತಮರಿಗೆ ಬೋಧಿಸುತ್ತಾ ಇರುತ್ತಿರಲೊಂದು ದಿನ ವೇದಗಳ ಕುರಿತಾದ ದಿವ್ಯಜ್ಞಾನ ಪ್ರಾಪ್ತಿಯಾಯಿತು. ಅಖಂಡವಾಗಿ ಆರ್ಜನೆಗೆ ಕಷ್ಟಕರವಾಗಿದ್ದ ವೇದ ಬಳಕೆಗೆ ಸರಳವಾಗಿರದೆ ಜಟಿಲವಾಗಿತ್ತು. ಆಳವಾದ ಅಧ್ಯಯನ ಮಾಡಿ ಸಂಸ್ಕರಿಸಿ, ಪರಿಷ್ಕರಿಸಿ ಅನಂತ ವೃತ್ತದಂತಿದ್ದ ವೇದವನ್ನು ವ್ಯಾಸ ಅಂದರೆ ಅರ್ಧ – ಮತ್ತೆ ಪುನರರ್ಧರ್ಧ ಅಂದರೆ ನಾಲ್ಕು ಭಾಗ ಮಾಡಿ ಸರಳ ಮಾಡಿದರು. ಈಗ ವೇದದ ಬಳಕೆಯು ಉದ್ದೇಶನುಸಾರ ವಿಭಜನೆಯಾಯ್ತು. ಇದರ ಜೊತೆ ಕೆಲ ಉಪವೇದಗಳನ್ನೂ ಸೃಜಿಸಿದರು.
ಅವರ ನಾಲ್ಕು ಶಿಷ್ಯರಿಗೆ ವ್ಯಾಸ ವಿಭಜಿತ ಈ ನಾಲ್ಕು ವೇದಗಳನ್ನು ಬೋಧಿಸಿದರು. ಋಗ್ವೇದ ವನ್ನು (ಯಜ್ಞಗಳಲ್ಲಿ ದೇವತೆಗಳನ್ನು ಆಹ್ವಾನಿಸುವ ಋಕ್ಕು- ಪ್ರಾರ್ಥನಾ ಮಂತ್ರ) ಶಿಷ್ಯ ಪೈಲ ಮುನಿ ಗಳಿಗೆ, ಯಜುರ್ವೇದ ವನ್ನು ( ಯಜ್ಞಗಳಲ್ಲಿ ದೇವತೆಗಳಿಗೆ ಆಹುತಿ ಇಕ್ಕುವ ಋಕ್ಕು ) ನನಗೂ ( ವೈಶಂಪಾಯನ ರಿಗೆ), ಸಾಮ ವೇದ ವನ್ನು ( ದೇವತೆಗಳನ್ನು ಸ್ತೋತ್ರ ಮಾಡುವ ನಾನಾ ವಿಧದ ಋಕ್ಕು) ಜೈಮಿನಿ ಮುನಿ ಗಳಿಗೂ, ಅಥರ್ವ ವೇದವನ್ನು ( ಶಾಂತಿಕ, ಪೌಷ್ಟಿಕ, ಅಭಿಚಾರಿಕ ಮಂತ್ರ ಹಾಗು ಹೋಮ ಹವನಾದಿಗಳ ವಿಚಾರ.) ಸುಮಂತು ಮುನಿಗಳಿಗೆ ಅಧ್ಯಯನ ಮಾಡಿಸಿದರು.
ಇನ್ನೂ ಹಲವು ಉಪವೇದಗಳನ್ನೂ ವಿಭಾಗಿಸಿದ ಇವರನ್ನು ವ್ಯಾಸ ಭಗವಾನ ರೆಂದು ಪ್ರಾಜ್ಞರು ಕೊಂಡಾಡಿದರು. ಅದೇ ಹೆಸರಿನಿಂದ ಲೋಕ ಲೋಕಗಳಲ್ಲೂ ಖ್ಯಾತನಾಮರಾದರು.
ಮುಂದುವರಿಯುವುದು……































































































































