
ಗುವಾಹಟಿ (ಅಸ್ಸಾಂ): ಪತ್ನಿಯನ್ನು ಕೊಂದು, ಆಕೆಯ ರುಂಡವನ್ನು ಫ್ರಿಡ್ಜ್ನಲ್ಲಿ ಬಚ್ಚಿಟ್ಟಿದ್ದ ಪ್ರಕರಣದ ಪ್ರಮುಖ ಆರೋಪಿ ರಾಮಾನುಜ್ ಗೋಸ್ವಾಮಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟಿದ್ದಾನೆ. ಗುವಾಹಟಿಯಲ್ಲಿ ನಡೆದಿದ್ದ ಈ ಭೀಕರ ಕೊಲೆ ಪ್ರಕರಣದ ಆರೋಪಿಯ ಅಂತ್ಯವೂ ದುರಂತವಾಗಿ ಸಂಭವಿಸಿದೆ.
ಏನಿದು ಘಟನೆ?
ಗುವಾಹಟಿಯ ಹತಿಗಾಂವ್ನ ಫ್ಲಾಟ್ನಲ್ಲಿ ಕ್ಯಾಬ್ ಚಾಲಕ ರಾಮಾನುಜ್ ಗೋಸ್ವಾಮಿ ತನ್ನ ಪತ್ನಿ ರಿಯಾ ತಾಲುಕ್ದಾರ್ (25) ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಆಕೆಯ ತಲೆ ಹಾಗೂ ಬೆರಳುಗಳನ್ನು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಸುತ್ತಿ ಫ್ರಿಡ್ಜ್ನಲ್ಲಿ ಬಚ್ಚಿಟ್ಟಿದ್ದ. ಫ್ಲಾಟ್ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿತ್ತು.
ಕೊಲೆಯ ಬಳಿಕ ರಾಮಾನುಜ್ ಪೊಲೀಸರಿಗೆ ಶರಣಾಗಿದ್ದ. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೂ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದ ಆತ, ಜೈಲಿನಿಂದ ಬಿಡುಗಡೆಯಾದ ಬಳಿಕ ಪತ್ನಿಯ ಪ್ರಿಯಕರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಏಳು ದಿನಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಸುಮಾರು 3 ಗಂಟೆಗೆ ವೈದ್ಯಕೀಯ ತಪಾಸಣೆಗಾಗಿ ಆತನನ್ನು GMCHಗೆ ಕರೆದೊಯ್ಯಲಾಗುತ್ತಿತ್ತು. ನರಕಾಸುರ ಬೆಟ್ಟದ ಬಳಿ ಸಾಗುತ್ತಿದ್ದ ವೇಳೆ ರಾಮಾನುಜ್ ತಪ್ಪಿಸಿಕೊಳ್ಳಲು ಏಕಾಏಕಿ ಪೊಲೀಸ್ ವಾಹನದಿಂದ ಜಿಗಿದಿದ್ದಾನೆ.
ಜಿಗಿದ ಪರಿಣಾಮ ಆತನ ತಲೆಗೆ ಗಂಭೀರ ಗಾಯವಾಗಿದ್ದು, ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೂ ಮುನ್ನವೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.





























































































































