ಒಂದು ಟಿಪ್ಪರ್ ಲೋಡ್ ನಷ್ಟು ಹುಲ್ಲು ಸಂಗ್ರಹಿಸಿ ನೀಲಾವರ ಗೋಶಾಲೆಗೆ ಸಮರ್ಪಣೆ

ಕಾರ್ಕಳ: ಗೋವುಗಳಿಗೆ ಅಗತ್ಯವಿರುವ ಮೇವನ್ನು ಸಂಗ್ರಹಿಸಿ ಗೋಶಾಲೆಗೆ ಸಮರ್ಪಿಸುವ ಉದ್ದೇಶದಿಂದ ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ, ಕಾರ್ಕಳ ಟೈಗರ್ಸ್ ಅವರ ಸಹಯೋಗದೊಂದಿಗೆ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಕಾರ್ಕಳ ಇವರ ಸಹಕಾರದೊಂದಿಗೆ ಆಯೋಜಿಸಲಾದ “ಗೋವಿಗಾಗಿ ಮೇವು – ಗೋಗ್ರಾಸ” ಸಂಗ್ರಹ ಅಭಿಯಾನವು ಭಾನುವಾರ ಯಶಸ್ವಿಯಾಗಿ ನಡೆಯಿತು.
ಸೆಪ್ಟೆಂಬರ್ 13ರಂದು ಬೆಳಿಗ್ಗೆ 6.30ರಿಂದ 8.30ರವರೆಗೆ ಕಾರ್ಕಳದ ರಾಮಸಮುದ್ರದ ಬಳಿಯ ಮಂಗಲಪಾದೆ ತೋಟಗಾರಿಕಾ ಇಲಾಖೆಯ ಪರಿಸರದಲ್ಲಿ ಅಭಿಯಾನ ನಡೆಯಿತು.
ಗೋಸೇವೆಯ ಉದ್ದೇಶದಿಂದ ಆಯೋಜಿಸಲಾದ ಈ ಅಭಿಯಾನದಲ್ಲಿ ಸುಮಾರು 45 ಮಂದಿ ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿದರು. ಸ್ವಯಂಸೇವಕರು ಸ್ಥಳದಲ್ಲಿ ಲಭ್ಯವಿದ್ದ ಹುಲ್ಲನ್ನು ಸಂಗ್ರಹಿಸಿ, ಅದನ್ನು ಸಾಗಿಸಲು ಅಗತ್ಯವಿರುವ ವ್ಯವಸ್ಥೆ ಮಾಡಿದರು.
ಅಭಿಯಾನದ ಮೂಲಕ ಸುಮಾರು ಒಂದು ಟಿಪ್ಪರ್ ಲೋಡ್‌ನಷ್ಟು ಹುಲ್ಲು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಹುಲ್ಲನ್ನು ಬಳಿಕ ನೀಲಾವರದ ಗೋಶಾಲೆಗೆ ಸಮರ್ಪಿಸಲಾಯಿತು. ಗೋಶಾಲೆಯಲ್ಲಿರುವ ಗೋವುಗಳಿಗೆ ಆಹಾರವಾಗಿ ಈ ಮೇವು ಬಳಕೆಯಾಗಲಿದೆ.
ಗೋವುಗಳ ಸಂರಕ್ಷಣೆ ಹಾಗೂ ಗೋಶಾಲೆಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ನಡೆದ ಈ ಅಭಿಯಾನವು ಸಾಮಾಜಿಕ ಸೇವೆ ಮತ್ತು ಗೋಸೇವೆಯ ಮಹತ್ವವನ್ನು ಸಾರುವಂತಾಯಿತು. ಸ್ವಯಂಸೇವಕರ ಉತ್ಸಾಹಭರಿತ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.
ಗೋಸೇವೆಯಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸುವ ಅಗತ್ಯವಿದ್ದು, “ಗೋಸೇವೆ – ನಮ್ಮೆಲ್ಲರ ಹೊಣೆ” ಎಂಬ ಸಂದೇಶದೊಂದಿಗೆ ಅಭಿಯಾನವನ್ನು ಯಶಸ್ವಿಗೊಳಿಸಿದ ಎಲ್ಲಾ ಸ್ವಯಂಸೇವಕರು ಹಾಗೂ ಸಹಕರಿಸಿದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸ್ವಚ್ಛ ಕಾರ್ಕಳ ಬ್ರಿಗೇಡ್ ಕೃತಜ್ಞತೆ ಸಲ್ಲಿಸಿರುತ್ತಾರೆ .







































