
ಲಂಡನ್: ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ವಿವಿಧ ಬ್ಯಾಂಕ್‌ಗಳಿಂದ ಪಡೆದಿದ್ದ ಸುಮಾರು ₹9,000 ಕೋಟಿ ಸಾಲ ಮರುಪಾವತಿಸದ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಉದ್ಯಮಿ ವಿಜಯ್ ಮಲ್ಯ, ತಾನು ಅನ್ಯಾಯಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ. ಯುಕೆಯಲ್ಲಿನ ಕಾನೂನು ಪ್ರಕ್ರಿಯೆಗಳಿಂದಾಗಿ ವಿದೇಶದಲ್ಲೇ ಉಳಿಯುವಂತಾಗಿದೆ ಎಂದಿರುವ ಅವರು, ‘ನಾನು ಜಿರಲೆಯಾಗಬೇಕೆನೋ?’ ಎಂದು ಪ್ರಶ್ನಿಸಿದ್ದಾರೆ.
‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದ ಪ್ರತಿಭಟನೆಯನ್ನು ಉಲ್ಲೇಖಿಸಿದ ಮಲ್ಯ, ತಾನು ಎದುರಿಸುತ್ತಿರುವ ಅನ್ಯಾಯಗಳನ್ನು ನೋಡಿದರೆ ಜಿರಲೆಯಾಗಬೇಕೆನಿಸುತ್ತದೆ ಎಂದಿದ್ದಾರೆ. ಹಲವು ವರ್ಷಗಳಿಂದ ನಿರಂತರವಾಗಿ ಅನ್ಯಾಯ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧದ ಪ್ರಕರಣಗಳ ಕುರಿತು ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ (ED) ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮಿಂದ ₹14,000 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ಬ್ಯಾಂಕ್‌ಗಳಿಗೆ ನೀಡಿರುವುದನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ED ಸಲ್ಲಿಸಿರುವ ಅಫಿಡವಿಟ್‌ನಲ್ಲಿ 2021ರಲ್ಲೇ ₹14,131.60 ಕೋಟಿ ವಸೂಲಿ ಮಾಡಿರುವುದಾಗಿ ತಿಳಿಸಲಾಗಿದೆ ಎಂದು ಮಲ್ಯ ಹೇಳಿದ್ದಾರೆ. ತಮ್ಮ ಹೇಳಿಕೆಗಳನ್ನು ನಂಬದಿದ್ದರೂ, ED ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಗಮನಿಸುವಂತೆ ಅವರು ಒತ್ತಾಯಿಸಿದ್ದಾರೆ.
ತಾನು ‘ಪಲಾಯನವಾದಿ’ ಅಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಮಲ್ಯ, ಯುಕೆಯಲ್ಲಿನ ಕಾನೂನು ನಿರ್ಬಂಧಗಳಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡುವುದು ಭಾರತದಲ್ಲಿ ತಮ್ಮ ಭೌತಿಕ ಉಪಸ್ಥಿತಿಗೆ ಸಂಬಂಧಿಸಿದ ವಿಷಯವಲ್ಲ ಎಂದಿದ್ದಾರೆ.
1992ರಿಂದ ಯುಕೆಯಲ್ಲಿ ಖಾಯಂ ನಿವಾಸಿಯಾಗಿರುವ ತಮಗೆ ದೇಶ ತೊರೆಯಲು ಕಾನೂನುಬದ್ಧ ನಿರ್ಬಂಧವಿದೆ ಎಂದು ಮಲ್ಯ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ಭಾರತ ಸರ್ಕಾರ ತನ್ನನ್ನು ‘ಪೋಸ್ಟರ್ ಬಾಯ್’ ಆಗಿ ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ED ಅಫಿಡವಿಟ್‌ನ 17ನೇ ಪ್ಯಾರಾದಲ್ಲಿ 2021ರಲ್ಲಿ ₹14,131.60 ಕೋಟಿ ವಸೂಲಿ ಮಾಡಿರುವುದನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಐದು ವರ್ಷಗಳಾದರೂ ತನ್ನನ್ನು ಬ್ಯಾಂಕ್‌ಗಳಿಗೆ ವಂಚನೆ ಮಾಡಿದ ವ್ಯಕ್ತಿ ಎಂದು ಕರೆಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಯುತ ಲೆಕ್ಕಪತ್ರ ಹಾಗೂ ನ್ಯಾಯದಲ್ಲಿ ನಂಬಿಕೆ ಇರುವವರು ತಾನು ಪೋಸ್ಟ್ ಮಾಡಿರುವ ವಸೂಲಾತಿ ವಿವರಗಳನ್ನು ಗಮನಿಸಬೇಕು. ಮಾಧ್ಯಮಗಳು ತನ್ನನ್ನು ವಂಚಕ ಎಂದು ಕರೆಯುವ ಬದಲು, ತನ್ನ ಹಣ ಯಾವಾಗ ಮರುಪಾವತಿಯಾಗುತ್ತದೆ ಎಂಬ ಪ್ರಶ್ನೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.




































