ನಾಪತ್ತೆಯಾಗಿ ಎಂಟು ತಿಂಗಳ ಬಳಿಕ ಗರ್ಭಿಣಿಯಾಗಿ ಪತ್ತೆಯಾದ ಪಿಯುಸಿ ವಿದ್ಯಾರ್ಥಿನಿ

ಬೆಂಗಳೂರು: ಜನವರಿ 31ರಂದು ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವತಿಯರು ವಿದ್ಯಾರಣ್ಯಪುರದಲ್ಲಿರುವ ತಮ್ಮ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಆದರೆ, ಬಳಿಕ ಯಾವುದೇ ಸುಳಿವು ನೀಡದೆ ಇಬ್ಬರೂ ನಾಪತ್ತೆಯಾಗಿದ್ದರು. ಅವರು ಎಲ್ಲಿಗೆ ತೆರಳಿದ್ದಾರೆ, ಏನಾಗಿದೆ ಎಂಬುದು ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಮಲೆ ಮಹದೇಶ್ವರ ಬೆಟ್ಟದಲ್ಲಿ ಅವರು ಕಾಣಿಸಿಕೊಂಡಿದ್ದ ದೃಶ್ಯವೊಂದು ಮಾತ್ರ ಪೊಲೀಸರಿಗೆ ಲಭ್ಯವಾಗಿತ್ತು.
ಇದಾದ ಬಳಿಕ ಸುಮಾರು ಎಂಟು ತಿಂಗಳ ಕಾಲ ಪೊಲೀಸರು ಇಬ್ಬರು ಯುವತಿಯರಿಗಾಗಿ ನಿರಂತರವಾಗಿ ಹುಡುಕಾಟ ನಡೆಸಿದ್ದರು. ಈ ನಡುವೆ ಹೆತ್ತವರು ಮಕ್ಕಳಿಗಾಗಿ ಕಣ್ಣೀರಿಡುತ್ತಿದ್ದಾಗ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ದೊರೆತಿದೆ. ಮನೆ ಬಿಟ್ಟು ನಾಪತ್ತೆಯಾಗಿದ್ದ ಯುವತಿ ತನಿಷ್ಕಾ ಇದೀಗ ಗರ್ಭಿಣಿಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಪರಿಚಯವಾಗಿದ್ದ ಯುವಕನನ್ನೇ ಆಕೆ ಬಳಿಕ ವಿವಾಹವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಇಬ್ಬರು ಯುವತಿಯರ ನಾಪತ್ತೆ ಪ್ರಕರಣ ಪೊಲೀಸರಿಗೂ ಸಾಕಷ್ಟು ಸವಾಲಾಗಿತ್ತು. ಏಕೆಂದರೆ, ಒಂದೆರಡು ದಿನಗಳಲ್ಲದೆ ಸುಮಾರು ಎಂಟು ತಿಂಗಳ ಕಾಲ ತನಿಖೆ ನಡೆಸಿದರೂ ಅವರ ಸುಳಿವು ಪತ್ತೆಯಾಗಿರಲಿಲ್ಲ. ತನಿಖೆಯ ವೇಳೆ ಯುವತಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಪೊಲೀಸರು ಅಲ್ಲಿಗೂ ತೆರಳಿ ಹುಡುಕಾಟ ನಡೆಸಿದ್ದರು. ಆದರೂ ಯಾವುದೇ ಸ್ಪಷ್ಟ ಮಾಹಿತಿ ದೊರಕಿರಲಿಲ್ಲ.
ಬಳಿಕ ಯುವತಿಯರ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಅಧಿಕಾರಿಗಳು ಸಹ ತನಿಖೆಯನ್ನು ಮುಂದುವರಿಸಿದರೂ ಆರಂಭದಲ್ಲಿ ಯಾವುದೇ ಸುಳಿವು ಸಿಗದೆ ನಿರಾಸೆಯಾಗಿತ್ತು. ಯುವತಿಯರನ್ನು ಪತ್ತೆಹಚ್ಚುವುದು ಕಷ್ಟವಾಗಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಅಧಿಕಾರಿಗಳು ಅವರ ಬ್ಯಾಂಕ್ ಖಾತೆಗಳು ಹಾಗೂ ಮೊಬೈಲ್ ಸಂಖ್ಯೆಗಳ ಮೇಲೆ ನಿರಂತರ ನಿಗಾ ಇರಿಸಿದ್ದರು. ಇದೇ ಸಂದರ್ಭದಲ್ಲಿ ತನಿಖೆಗೆ ಮಹತ್ವದ ಸುಳಿವು ದೊರೆತಿದೆ.
ಜನವರಿ 31ರಂದು ಮನೆ ಬಿಟ್ಟು ತೆರಳಿದ್ದ ಇಬ್ಬರು ಯುವತಿಯರು ನೇರವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಅಲ್ಲಿ ಕನಕಪುರ ಮೂಲದ ಯುವಕನೊಬ್ಬನ ಪರಿಚಯವಾಗಿತ್ತು. ಈ ವೇಳೆ ಇಬ್ಬರೂ ತಮಗೆ ಯಾರೂ ಇಲ್ಲ, ತಾವು ಅನಾಥರು ಎಂದು ಆತನಿಗೆ ತಿಳಿಸಿದ್ದರೆನ್ನಲಾಗಿದೆ. ಅವರ ಮಾತನ್ನು ನಂಬಿದ ಯುವಕ ಇಬ್ಬರನ್ನೂ ಕನಕಪುರಕ್ಕೆ ಕರೆದುಕೊಂಡು ಹೋಗಿದ್ದನು.
ಮುಂದೆ ಇದೇ ಯುವಕ ತನಿಷ್ಕಾಳನ್ನು ವಿವಾಹವಾಗಿದ್ದಾನೆ. ಮನೆ ಬಿಟ್ಟು ಹೋಗಿದ್ದ ಯುವತಿ ಮದುವೆಯಾದ ಬಳಿಕ ಗರ್ಭಿಣಿಯಾಗಿದ್ದಳು. ಬಳಿಕ ತಾಯಿ ಕಾರ್ಡ್ ಮಾಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾದಾಗ ಆಕೆಯ ಬಗ್ಗೆ ಸುಳಿವು ದೊರಕಿದೆ. ತಾಯಿ ಕಾರ್ಡ್ಗೆ ಆಧಾರ್ ಲಿಂಕ್ ಅಗತ್ಯವಿದ್ದ ಕಾರಣ ಆಧಾರ್ ಕಾರ್ಡ್ ಸಲ್ಲಿಸಿದ ವೇಳೆ ಪೊಲೀಸರಿಗೆ ಮಾಹಿತಿ ತಲುಪಿದೆ ಎನ್ನಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ತನಿಷ್ಕಾಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಹೇಬಿಯಸ್ ಕಾರ್ಪಸ್ ಅರ್ಜಿ ಹಿನ್ನೆಲೆ ಸಿಐಡಿ ಅಧಿಕಾರಿಗಳು ಆಕೆಯನ್ನು ಹೈಕೋರ್ಟ್ಗೆ ಹಾಜರುಪಡಿಸಿದ್ದು ಈ ವೇಳೆ ತನಿಷ್ಕಾಗೆ 18 ವರ್ಷ ಪೂರ್ಣಗೊಂಡಿರುವ ಕಾರಣ, ಆಕೆ ಯಾರೊಂದಿಗೆ ವಾಸಿಸಲು ಬಯಸುತ್ತಾಳೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ತನಿಷ್ಕಾ, ತಾನು ವಿವಾಹವಾಗಿರುವ ಯುವಕನೊಂದಿಗೆ ಜೀವನ ನಡೆಸಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾಳೆ. ಹೀಗಾಗಿ ಆಕೆಗೆ ಪತಿಯೊಂದಿಗೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ.
ಇತ್ತ ತನಿಷ್ಕಾಳೊಂದಿಗೆ ನಾಪತ್ತೆಯಾಗಿದ್ದ ಮತ್ತೊಬ್ಬ ಯುವತಿ ತೇಜಸ್ವಿನಿಯ ಪತ್ತೆಗಾಗಿ ಪೊಲೀಸರು ಇದೀಗ ತನಿಖೆ ಚುರುಕುಗೊಳಿಸಿದ್ದಾರೆ. ತನಿಷ್ಕಾ ನೀಡಿರುವ ಮಾಹಿತಿಯ ಪ್ರಕಾರ, ತೇಜಸ್ವಿನಿ ಸಂಬಂಧಿಕರೊಬ್ಬರ ಮನೆಯಲ್ಲಿ ವಾಸಿಸುತ್ತಿದ್ದಾಳೆ ಎನ್ನಲಾಗಿದೆ. ಹೀಗಾಗಿ ಆಕೆಯನ್ನೂ ಶೀಘ್ರದಲ್ಲೇ ಪತ್ತೆಹಚ್ಚುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಹೆತ್ತವರಿಗೆ ಯಾವುದೇ ಮಾಹಿತಿ ನೀಡದೆ ಮನೆ ಬಿಟ್ಟು ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಪ್ರಕರಣದಲ್ಲಿ ಎಂಟು ತಿಂಗಳ ಬಳಿಕ ಮಹತ್ವದ ಬೆಳವಣಿಗೆ ನಡೆದಿದೆ. ತನಿಷ್ಕಾ ಪತ್ತೆಯಾಗಿದ್ದು, ಇನ್ನೊಬ್ಬ ಯುವತಿ ತೇಜಸ್ವಿನಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.




































