
ಪುಣೆ: ಆಸ್ತಿ ಮಾರಾಟ ಮಾಡಿದ ವಿಚಾರಕ್ಕೆ ಕೋಪಗೊಂಡ ಇಬ್ಬರು ಮಕ್ಕಳು ತಮ್ಮ ವೃದ್ಧ ತಂದೆ-ತಾಯಿಯ ಮೇಲೆ ನಡು ರಸ್ತೆಯಲ್ಲೇ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಪುಣೆಯ ಇಂದಾಪುರದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಇಬ್ಬರು ಸಹೋದರರು ಮರದ ಕೋಲುಗಳಿಂದ ತಮ್ಮ ಪೋಷಕರನ್ನು ಥಳಿಸಿದ್ದಾರೆ. 65 ವರ್ಷದ ತುಕಾರಾಂ ಕಿಸಾನ್ ರಾವತ್ ಹಾಗೂ ಅವರ ಪತ್ನಿ ಅಂಜನಾ ಅವರ ಮೇಲೆ ಪುತ್ರರಾದ ಸಂಜಯ್ ಮತ್ತು ರಾಜೇಂದ್ರ ರಾವತ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆಗಸ್ಟ್ 30ರ ಸಂಜೆ ದಂಪತಿ ವಾಕಿಂಗ್‌ಗೆ ತೆರಳಿದ್ದ ವೇಳೆ ಅವರನ್ನು ತಡೆದ ಮಕ್ಕಳು ಹಲ್ಲೆ ನಡೆಸಿದ್ದಾರೆ. ತಂದೆಯ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಜನಾ ಅವರಿಗೆ ಸೇರಿದ ಭೂಮಿಯನ್ನು ತಂದೆ ಮಾರಾಟ ಮಾಡಲು ಮುಂದಾಗಿದ್ದರಿಂದ ಮಕ್ಕಳು ಆಕ್ರೋಶಗೊಂಡಿದ್ದರು. ಆಸ್ತಿಯನ್ನು ವಾಪಸ್ ಪಡೆಯುವಂತೆ ಪೋಷಕರಿಗೆ ತಿಳಿಸಿದ್ದರೂ ಮಾತು ಕೇಳದ ಕಾರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ದೂರು ದಾಖಲು….
ಹಲ್ಲೆ ಕುರಿತು ತುಕಾರಾಂ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ನಿಯ ಮೇಲೆ ಹಲ್ಲೆ ತಡೆಯಲು ಮುಂದಾದಾಗ ತನ್ನ ಮೇಲೂ ದಾಳಿ ನಡೆಸಿದ್ದು, ಬೆನ್ನು, ಮುಖ ಹಾಗೂ ಭುಜ ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತುಕಾರಾಂ ಅವರ ದೂರಿನ ಮೇರೆಗೆ ಇಬ್ಬರು ಪುತ್ರರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.























































































