
ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ಮಾತನಾಡಿ ಡಿ.ಕೆ. ಶಿವಕುಮಾರ್ ಅವರು ಇನ್ನೂ 15 ವರ್ಷ ತಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮೊದಲು ಅವರು ಈ ಅವಧಿಯನ್ನು ಪೂರ್ಣಗೊಳಿಸಲಿ. ಅವರ ಕೈಯಲ್ಲಿ ಅಧಿಕಾರ ಮುಂದುವರಿದರೆ ವಿಧಾನಸೌಧವನ್ನೇ ಮಾರಾಟ ಮಾಡಬಹುದು ಎಂದು ಟೀಕಿಸಿದರು.
ರಾಜ್ಯದ ಮೇಲೆ ಮತ್ತಷ್ಟು ಸಾಲದ ಹೊರೆ ಹಾಕಲು 1 ಲಕ್ಷ ಕೋಟಿ ರೂ. ಸಾಲ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ ಅವರು, ರಾಜ್ಯವನ್ನು ಸಾಲದ ಪ್ರಪಾತಕ್ಕೆ ತಳ್ಳಲು ಹೊರಟಿದ್ದಾರೆ. ವಿಧಾನಸೌಧವೂ ನಮ್ಮಪ್ಪನ ಆಸ್ತಿ ಎಂಬಂತೆ ಕೆಲವರು ವರ್ತಿಸುತ್ತಿದ್ದಾರೆ. ಇಂತಹವರಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದರು. ಬೆಂಗಳೂರಿನಲ್ಲಿ ಕಸ ವಿಲೇವಾರಿಗೂ, ಬಿಡದಿ ಟೌನ್‌ಶಿಪ್‌ಗೂ ಸಾಲ ಮಾಡಲಾಗುತ್ತಿದೆ. ಸರ್ಕಾರದ ಪ್ರತಿಯೊಂದು ಯೋಜನೆಗೂ ಸಾಲವೇ ಆಧಾರವಾಗಿದೆ ಎಂದು ದೂರಿದರು.
ಭಾರತ್ ಜೋಡೊ ಸಂಘಗಳಿಗೆ ಸಾವಿರ ಕೋಟಿ ರೂಪಾಯಿ ನೀಡಲು ಮಾತ್ರ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಪ್ರತಿ ಪಂಚಾಯಿತಿಗೆ ಸಂಘದ ಹೆಸರಿನಲ್ಲಿ 10 ಲಕ್ಷ ರೂ. ನೀಡಲಾಗುತ್ತಿದೆ. ಇದು ಜನರ ತೆರಿಗೆ ಹಣವಾಗಿದ್ದು, ಅದರ ದುರ್ಬಳಕೆಗೆ ಅವಕಾಶ ನೀಡಬಾರದು ಎಂದರು.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ದಸರಾವನ್ನು ಅದ್ದೂರಿಯಾಗಿ ನಡೆಸುವ ಬದಲು ಅರ್ಥಪೂರ್ಣವಾಗಿ ಆಚರಿಸಬೇಕು. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಆದರೆ ಆಡಳಿತ ನಡೆಸುತ್ತಿರುವವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಶೀಘ್ರದಲ್ಲೇ ಬರಪೀಡಿತ ಉತ್ತರ ಕರ್ನಾಟಕದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸುವುದಾಗಿ ತಿಳಿಸಿದರು. ಹಲವು ಪ್ರದೇಶಗಳಲ್ಲಿ ಜನರು ಸಂಕಷ್ಟದಿಂದ ಗುಳೆ ಹೋಗುತ್ತಿದ್ದಾರೆ. ಆದರೆ ಸರ್ಕಾರ ಅಧಿಕಾರ ಹಂಚಿಕೆಯಲ್ಲಿ ಮೈಮರೆತಿದೆ ಎಂದು ವಾಗ್ದಾಳಿ ನಡೆಸಿದರು.





















































































