
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೂಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ನ್ಯಾಯಾಲಯ ಅಂಗೀಕರಿಸಿದೆ. ಸೆಪ್ಟೆಂಬರ್ 2ರಂದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡುವಂತೆ ಸಮನ್ಸ್ ಜಾರಿ ಮಾಡಲಾಗಿದೆ.
ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರದೂಷ್ ಅವರನ್ನು ಅಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಸೂಚಿಸಿದ್ದಾರೆ.
ಆರೋಪಿಯನ್ನು ಸುರಕ್ಷಿತವಾಗಿ ನ್ಯಾಯಾಲಯಕ್ಕೆ ಕರೆತರುವಂತೆ ಕಾಮಾಕ್ಷಿಪಾಳ್ಯ ಪೊಲೀಸರು ಹಾಗೂ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಾಫಿ ಸಾಕ್ಷಿಗೆ ಸಂಬಂಧಿಸಿದ ಅರ್ಜಿಯ ಅಂಶಗಳ ಕುರಿತು 59ನೇ ಸಿಸಿಎಚ್ ನ್ಯಾಯಾಲಯ ಈ ಹಿಂದೆ ಸ್ಪಷ್ಟನೆ ಪಡೆದಿತ್ತು. ಅಲ್ಲದೆ, ಆದೇಶದ ಪ್ರತಿಯನ್ನು ಪ್ರದೂಷ್‌ಗೆ ನೀಡಿ ಅವರ ಸಹಿ ಪಡೆಯುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು.
ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುವುದು ಹಾಗೂ ಇತರೆ ಆರೋಪಿಗಳ ಪಾತ್ರ ಮತ್ತು ತನ್ನಲ್ಲಿರುವ ಮಾಹಿತಿಯನ್ನು ನ್ಯಾಯಾಲಯದ ಮುಂದೆ ತಿಳಿಸುವ ಷರತ್ತಿನೊಂದಿಗೆ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯಾಗಿ ಅಂಗೀಕರಿಸಲಾಗಿದೆ.





















































































