
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮದ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರು ಶುಕ್ರವಾರ ಸಂಜೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿದ್ದ ಹೋರಾಟಕ್ಕೆ ಇದರಿಂದ ಅಂತ್ಯ ಸಿಕ್ಕಂತಾಗಿದೆ.
ದೆಹಲಿಯಿಂದ ಬೆಂಗಳೂರಿಗೆ ಮರಳಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ, ತಮ್ಮ ವಿರುದ್ಧ ನಡೆದದ್ದು ಮನುವಾದಿಗಳ ಕುತಂತ್ರ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಮೂರು ತಿಂಗಳು ಜೈಲಿನಲ್ಲಿದ್ದೆ ಎಂದು ಹೇಳಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸ್ವಇಚ್ಛೆಯಿಂದ ಸಚಿವ ಸ್ಥಾನ ತ್ಯಜಿಸುತ್ತಿದ್ದೇನೆ ಎಂದು ಭಾವುಕರಾದ ನಾಗೇಂದ್ರ ಕಣ್ಣೀರಿಟ್ಟರು. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದ ಅವರು, ‘ಜನತಾ ನ್ಯಾಯಾಲಯಕ್ಕೆ ಹೋಗೋಣ, ತಾಕತ್ತಿದ್ದರೆ ಎದುರಿಸಿ’ ಎಂದು ಬಿಜೆಪಿಗೆ ಸವಾಲು ಹಾಕಿದರು.
ವಿರೋಧ ಪಕ್ಷಗಳು ಕುತಂತ್ರ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದ ಅವರು, ಸದನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಬಿಜೆಪಿ ಚರ್ಚೆಗೆ ಬಂದಿಲ್ಲ ಎಂದರು. ಈಗ ಇಶ್ಯೂಲೆಸ್ ಇಶ್ಯೂ ಇಟ್ಟುಕೊಂಡು ಪಾದಯಾತ್ರೆಗೆ ಹೊರಟಿದ್ದಾರೆ. ಬಿಜೆಪಿಯವರು ಮನುಸ್ಮೃತಿಯ ವಾದ ಮಾಡುತ್ತಿದ್ದು, ಸಂವಿಧಾನ ನಮಗೆಲ್ಲಾ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ತಾನು ದಲಿತ ಎಂಬ ಕಾರಣಕ್ಕೆ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ ನಾಗೇಂದ್ರ ದಲಿತರು, ಬಡವರು ಹಾಗೂ ಆದಿವಾಸಿಗಳ ಬಗ್ಗೆ ಬಿಜೆಪಿಗೆ ವಿರೋಧದ ಮನಸ್ಥಿತಿ ಇದೆ ಎಂದು ದೂರಿದರು. 2024ರಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ, ಬಳಿಕ ವಿನಾಕಾರಣ ಬಂಧಿಸಿ ಮೂರು ತಿಂಗಳು ಜೈಲಿಗೆ ಕಳುಹಿಸಲಾಗಿತ್ತು ಎಂದರು.
‘ಮನುವಾದಿಗಳ ಕುತಂತ್ರಕ್ಕೆ ನಾನು ಬಗ್ಗುವುದಿಲ್ಲ, ಸಂವಿಧಾನಕ್ಕೆ ಮಾತ್ರ ತಲೆಬಾಗುತ್ತೇನೆ’ ಎಂದು ಹೇಳಿದ ಅವರು ಬಳ್ಳಾರಿಯ ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧವೂ ಕಿಡಿಕಾರಿದರು. ‘ಸೋ ಕಾಲ್ಡ್ ಲೀಡರ್‌ಗಳು ಅಖಾಡಕ್ಕೆ ಬನ್ನಿ’ ಎಂದು ಸವಾಲು ಹಾಕಿದರು.
ಇಡಿ, ಸಿಬಿಐ ಮೂಲಕ ಪ್ರಕರಣ ದಾಖಲಿಸಿ ಬೆದರಿಸುವ ತಂತ್ರಗಳಿಗೆ ತಾನು ಹೆದರುವುದಿಲ್ಲ ಎಂದ ನಾಗೇಂದ್ರ, ರೆಡ್ಡಿ ಮತ್ತು ರಾಮುಲು ಜನತಾ ನ್ಯಾಯಾಲಯಕ್ಕೆ ಬರಲಿ. ಬಳ್ಳಾರಿಯಲ್ಲಿ ಅವರು ‘ರಿಜೆಕ್ಟ್ ಪೀಸ್‌ಗಳು, ಚಲಾವಣೆ ಇಲ್ಲದ ನಾಣ್ಯಗಳು’ ಎಂದು ವ್ಯಂಗ್ಯವಾಡಿದರು.





















































































