
ನವದೆಹಲಿ: ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಚಿಪ್ಸ್, ಕೂಲ್ ಡ್ರಿಂಕ್ಸ್ ಸೇರಿದಂತೆ ಪ್ಯಾಕೆಟ್ ಆಹಾರಗಳ ಮೇಲೆ ಕೆಂಪು ಎಚ್ಚರಿಕೆ ಲೇಬಲ್ ಅಳವಡಿಸುವ ಪ್ರಸ್ತಾವದಿಂದ FSSAI ಹಿಂದೆ ಸರಿದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆಹಾರ ಕಂಪನಿಗಳೊಂದಿಗೆ ನಡೆದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಭಾರತದಲ್ಲಿ ಮಾರಾಟವಾಗುವ ಕೆಲವು ಆಹಾರ ಉತ್ಪನ್ನಗಳಲ್ಲಿ ವಿದೇಶಿ ಆವೃತ್ತಿಗಳಿಗಿಂತ ಸಕ್ಕರೆ, ಉಪ್ಪು ಸೇರಿದಂತೆ ಇತರ ಪದಾರ್ಥಗಳ ಪ್ರಮಾಣ ಹೆಚ್ಚಿದೆ. ಉದಾಹರಣೆಗೆ, ಲಂಡನ್‌ನ ಫ್ಯಾಂಟಾಕ್ಕಿಂತ ಭಾರತದಲ್ಲಿನ ಫ್ಯಾಂಟಾದಲ್ಲಿ ಸಕ್ಕರೆ ಸುಮಾರು ಮೂರು ಪಟ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ.
ಪ್ಯಾಕೆಟ್‌ಗಳ ಮುಂಭಾಗದ ಬಣ್ಣದ ಎಚ್ಚರಿಕೆ ಲೇಬಲ್‌ಗಳು ಗ್ರಾಹಕರಲ್ಲಿ ಗೊಂದಲ ಮೂಡಿಸಬಹುದು ಎಂದು ಆಹಾರ ಉದ್ಯಮ ವಿರೋಧಿಸಿತ್ತು. ಬದಲಾಗಿ ಆಹಾರದ ಪ್ರಮಾಣ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವಂತೆ ಒತ್ತಾಯಿಸಿತ್ತು.
ಆದರೆ ಆರೋಗ್ಯ ಕಾರ್ಯಕರ್ತರು ಲೇಬಲ್‌ಗಳನ್ನು ಬೆಂಬಲಿಸಿದ್ದು, ಗ್ರಾಹಕರಿಗೆ ಆರೋಗ್ಯಕರ ಆಹಾರ ಆಯ್ಕೆ ಮಾಡಲು ಇದು ನೆರವಾಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ ಸುಮಾರು 20 ದೇಶಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ.
ಇದೇ ವೇಳೆ, ಭಾರತದಲ್ಲಿ ಮಾರಾಟವಾಗುವ ಕಿಟ್‌ಕ್ಯಾಟ್ ಸೇರಿದಂತೆ ಕೆಲವು ಉತ್ಪನ್ನಗಳ ಗುಣಮಟ್ಟದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಆಹಾರ ತಜ್ಞ ರೇವಂತ್ ಹಿಮತ್ಸಿಂಗ್ಕಾ ಅವರು ಭಾರತೀಯ ಮತ್ತು ವಿದೇಶಿ ಆವೃತ್ತಿಗಳ ವ್ಯತ್ಯಾಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯ ಹಿನ್ನೆಲೆಯಲ್ಲಿ ಈ ವಿಚಾರ ಮಹತ್ವ ಪಡೆದಿದೆ. 2050ರ ವೇಳೆಗೆ ಸುಮಾರು 45 ಕೋಟಿ ಭಾರತೀಯರು ಅಧಿಕ ತೂಕ ಅಥವಾ ಬೊಜ್ಜಿನಿಂದ ಬಳಲುವ ಸಾಧ್ಯತೆಯಿದೆ ಎಂದು ಅಧ್ಯಯನವನ್ನು ರಾಯಿಟರ್ಸ್ ಉಲ್ಲೇಖಿಸಿದೆ.
ಈ ನಡುವೆ FSSAI ನಿಲುವಿನ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, “ಭಾರತ ತನ್ನ ನಾಗರಿಕರ ಒಟ್ಟಾರೆ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದೆ ಎಂಬುದನ್ನು ಜಗತ್ತು ತಿಳಿಯಬೇಕು” ಎಂದು ಹೇಳಿದೆ.





















































































