
ಬ್ರಹ್ಮಾವರ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದ ಜಗಳದಲ್ಲಿ ಪುತ್ರನೊಬ್ಬ ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಘಟನೆ ಗಾಂಧಿನಗರದಲ್ಲಿ ರವಿವಾರ (ಆ.23) ರಾತ್ರಿ ನಡೆದಿದೆ.
ಮೃತರನ್ನು ಗಾಂಧಿನಗರ ನಿವಾಸಿಗಳಾದ ಮೆಹಬೂಬ್ ಅಲಿ ಮತ್ತು ಅವರ ಪತ್ನಿ ಶಂಶಾದ್ ಬೇಗಂ ಎಂದು ಗುರುತಿಸಲಾಗಿದೆ. ಪುತ್ರ ಶಾಹಿದ್ ಅಲಿಯನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೆಹಬೂಬ್ ಅಲಿ ಲಾರಿ ಚಾಲಕರಾಗಿದ್ದರೆ, ಶಾಹಿದ್ ಅಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರಾತ್ರಿ ತಂದೆ-ತಾಯಿಯೊಂದಿಗೆ ಜಗಳವಾದ ಬಳಿಕ ಸಿಟ್ಟಿನಿಂದ ಶಾಹಿದ್ ಸುತ್ತಿಗೆಯಿಂದ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಆರೋಪಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಘಟನೆ ನಡೆದಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



















































































