
ನವದೆಹಲಿ: 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶೀತದ ಲಕ್ಷಣಗಳಿಗೆ ನೀಡುವ ಕ್ಲೋರ್‌ಫೆನಿರಾಮೈನ್ ಮೆಲೇಟ್ ಮತ್ತು ಫೆನಿಲೆಫ್ರಿನ್ ಹೈಡ್ರೋಕ್ಲೋರೈಡ್ ಒಳಗೊಂಡ ಸಂಯೋಜಿತ ಔಷಧಗಳ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಔಷಧಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಯ ಮೇಲೂ ನಿರ್ಬಂಧ ಹೇರಲಾಗಿದೆ.
ಇಂತಹ ಔಷಧಗಳನ್ನು ಮಕ್ಕಳಿಗೆ ನೀಡುವಾಗ ಪೋಷಕರು ಎಚ್ಚರಿಕೆ ವಹಿಸುವಂತೆ ಸರ್ಕಾರ ಸೂಚಿಸಿದೆ. ಔಷಧದ ಲೇಬಲ್, ಪ್ಯಾಕೇಜ್ ಒಳಪತ್ರ ಹಾಗೂ ಜಾಹೀರಾತುಗಳಲ್ಲಿ 4 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಬಳಸಬಾರದು ಎಂಬ ಎಚ್ಚರಿಕೆ ಕಡ್ಡಾಯವಾಗಿ ಮುದ್ರಿಸುವಂತೆ ತಯಾರಕರಿಗೆ ಸೂಚಿಸಲಾಗಿದೆ.
ಈ ಔಷಧ ಸೇವನೆಯಿಂದ ಅತಿಯಾದ ನಿದ್ರೆ, ಹೃದಯ ಬಡಿತ ಹೆಚ್ಚಳ ಸೇರಿದಂತೆ ಕೆಲವೊಮ್ಮೆ ಗಂಭೀರ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಮಕ್ಕಳಿಗೆ ಶೀತವಾದಾಗ ಉಪ್ಪುನೀರಿನ ಮೂಗಿನ ಹನಿ ಬಳಸುವುದು ಹಾಗೂ ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಜೇನುತುಪ್ಪ ನೀಡುವಂತಹ ಸುರಕ್ಷಿತ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ.



















































































