
ಚೆನ್ನೈ: ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದೆ. 12 ವಾರಗಳ ಹೆರಿಗೆ ರಜೆಯನ್ನು 365 ದಿನಗಳಿಗೆ ವಿಸ್ತರಿಸುವುದಾಗಿ ಸಚಿವರು ಘೋಷಿಸಿದ್ದು ಸಂವಿಧಾನದ 42ನೇ ವಿಧಿಯ ಆಶಯದಂತೆ ಮಹಿಳೆಯರಿಗೆ ಅಗತ್ಯ ಮಾತೃತ್ವ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅನುದಾನ ಕೋರಿಕೆ ಮೇಲಿನ ಚರ್ಚೆ ವೇಳೆ ಸಚಿವ ಶರತ್ ಅವರು ಹೆರಿಗೆ ರಜೆ ಹೆಚ್ಚಳದ ಘೋಷಣೆ ಮಾಡಿದ್ದಾರೆ. ಎರಡಕ್ಕಿಂತ ಕಡಿಮೆ ಮಕ್ಕಳಿರುವ ಮಹಿಳಾ ಸರ್ಕಾರಿ ನೌಕರರಿಗೆ 365 ದಿನಗಳ ಹೆರಿಗೆ ರಜೆ ನೀಡಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ವಿವಾಹಿತ ಉದ್ಯೋಗಿಗಳಿಗೆ 12 ವಾರಗಳಿಗಿಂತ ಹೆಚ್ಚಿನ ರಜೆ ನೀಡುವ ಪ್ರಸ್ತಾವವಿದೆ.
ಕಡಿಮೆಯಾಗುತ್ತಿರುವ ಜನಸಂಖ್ಯೆ ಹಾಗೂ ತಾಯಂದಿರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಮೂರನೇ ಮಗುವಿಗೆ ಹೆರಿಗೆ ರಜೆಯನ್ನು 12 ವಾರಗಳಿಂದ ಒಂದು ವರ್ಷಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದರೊಂದಿಗೆ ಮಹಿಳೆಯರಿಗೆ ಮಾಸಿಕ ₹2,500 ನೆರವು, ಉಚಿತ ಸರ್ಕಾರಿ ಬಸ್ ಪ್ರಯಾಣ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪುದುಮೈ ಪೆಣ್ ಯೋಜನೆಯಡಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ಮಾಸಿಕ ₹1,000 ನೀಡಲಾಗುತ್ತಿದೆ.
ಇದಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ ಉಚಿತ ಚಿನ್ನದ ಉಂಗುರ ನೀಡುವ ‘ತೈಮಾಮನ್ ತಂಗ ಮೋತಿರಾಂ ತಿಟ್ಟಂ’ ಯೋಜನೆಯನ್ನೂ ಸರ್ಕಾರ ಘೋಷಿಸಿದೆ.


















































































