ಭಾಗ – 614
ಭರತೇಶ ಶೆಟ್ಟಿ,ಎಕ್ಕಾರು

ತೇಜಸ್ವಿನಿಯಾದ ದೇವಿ ನಡೆದ ಪೂರ್ಣ ಘಟನೆಗಳನ್ನು ಕಣ್ಣಾರೆ ಕಂಡಂತೆ ವಿವರಿಸುತ್ತಾ ಹೋದಳು. ಬ್ರಹ್ಮರುಗಳೆಲ್ಲಾ ಬಕದಾಲ್ಭ್ಯರ ಸಹಿತ ಇಲ್ಲಿಯವರೆಗೆ ಬಂದ ಕಥೆ, ಮಾತ್ರವಲ್ಲ ಅವರೆಲ್ಲರ ಮನದ ಭಾವವನ್ನು ಹೇಳಿದಾಗ ಎಲ್ಲರಿಗೂ ಪರಮಾಶ್ಚರ್ಯ. ನಮ್ಮ ಅಂತರಂಗ ಬಹಿರಂಗಗಳೆಲ್ಲವೂ ಈಕೆಗೆ ಹೇಗೆ ತಿಳಿಯಿತು? ನಮಗೆ ಈಕೆಯ ಪರಿಚಯವೆ ಇಲ್ಲ. ಈ ತನಕ ನೋಡಿದ್ದೂ ಇಲ್ಲ! ಆದರೂ ಈಕೆಗೆ ನಾವೆಲ್ಲರ ಪರಿಚಯ ಇದೆ ಎಂದರೆ ಈಕೆಗೆ ಅತಿಶಯವಾದ ಜ್ಞಾನಶಕ್ತಿಯಿದೆ ಎಂದು ಅರ್ಥೈಸಿ ಆಕೆಯ ಮಾತು ಕೇಳಲು ಉತ್ಸುಕರಾಗಿದರು.
ಆ ದೇವಿ ಮಾತು ಮುಂದುವರಿಸುತ್ತಾ “ಈ ಜಗತ್ತನ್ನು ಪರಿಪಾಲಿಸುವ ಭಗವಂತನಿದ್ದಾನೆ. ಆತನು ಪರಮಾತ್ಮ. ನಾನು ಪರಮಾತ್ಮನ ಸಂಕಲ್ಪ ಅಥವಾ ಇಚ್ಚೆಯ ರೂಪವಾಗಿದ್ದೇನೆ. ನನ್ನನ್ನು ನಿಯತಿ ಎಂದು ಕರೆಯುತ್ತಾರೆ. ನಿಮಗೆಲ್ಲರಿಗೂ ಒಂದು ಸತ್ಯವನ್ನು ಈ ಸಂದರ್ಭ ಹೇಳಲು ಬಯಸುತ್ತೇನೆ. ಇಲ್ಲಿ ಸೇರಿರುವ ನಾನು ಮತ್ತು ನೀವೆಲ್ಲರೂ ಪರಮಾತ್ಮನ ಶಕ್ತಿಯನ್ನು ಹೊಂದಿದವರಾಗಿದ್ದೇವೆ. ಆದರೆ ಆ ಶಕ್ತಿಯ ಪ್ರಮಾಣ ನಮ್ಮ ನಮ್ಮ ಕರ್ತವ್ಯಕ್ಕೆ ಅನುಗುಣವಾಗಿ ನಮ್ಮಲ್ಲಿ ನಿಕ್ಷೇಪಗೊಂಡಿದೆ. ಅಂದರೆ ಪರಮಾತ್ಮನ ಆಂಶಿಕ ಶಕ್ತಿ ಸಂಪನ್ನರಾದ ನಮ್ಮನ್ನು ನಾವು ಪರಮ ಶಕ್ತಿವಂತರು ಅಥವಾ ಪರಮೋಚ್ಚರು ಎಂದು ಭ್ರಮಿಸದೆ, ಯತಾರ್ಥ ಏನೆಂದು ತಿಳಿದುಕೊಂಡರೆ ಮತ್ತೆ ಪರಮಾತ್ಮನನ್ನು ಅರಿಯಲು ಪ್ರಯತ್ನ ಇಲ್ಲವಾಗಿ ಹೋಗುತ್ತದೆ. ಹೀಗೆ ನಮ್ಮಲ್ಲಿ ಅಷ್ಟೋ ಇಷ್ಟೋ ಪರಮಾತ್ಮನ ಶಕ್ತಿ ಕೂಡಿಕೊಂಡಿದೆ. ಹಾಗಾಗಿ ನಾವು ನಮಗಿಂತ ಸಾಮಾನ್ಯರಿಗೆ ದೇವರಾಗಿದ್ದೇವೆ ಹೊರತು ನಾವು ಯಾರೂ ಪರಮಾತ್ಮರಲ್ಲ. ಈ ತನಕ ನೀವು ನಿಮ್ಮಲ್ಲಿ ಸ್ಥಿತವಾಗಿರುವ ಪರಮಾತ್ಮನ ಅಂಶವನ್ನು ವರ ನೀಡುವುದಕ್ಕೆ, ಅಲ್ಲ ಶಾಪಕೊಡುವುದಕ್ಕೆ ಬಳಸಿಕೊಳ್ಳುತ್ತಿದ್ದೀರಿ. ಯಾರಾದರೂ ನಿಮ್ಮ ಕುರಿತಾಗಿ ಸ್ತುತಿ ಮಾಡಿದಾಗ ಬಹು ಬೇಗ ಮನಸೋತು ಅವರ ಮನೋಭಿಷ್ಟ ಸಿದ್ಧಿಗಾಗಿ ನಿಮ್ಮ ಶಕ್ತಿಯನ್ನು ಧಾರೆಯೆರೆದು ವರಪ್ರದರಾಗಿದ್ದೀರಿ. ಇದರ ಪರಿಣಾಮ ಏನು ಎಂಬ ಕನಿಷ್ಟ ಕಲ್ಪನೆಯಾದರೂ ನಿಮಗಿದೆಯೆ? ನೀವು ಇದೇ ರೀತಿ ಅವ್ಯಯವೂ ಅಕ್ಷಯವೂ ಆಗಿ ಉಳಿಸಬೇಕಾದ ಪರಮಾತ್ಮನ ಶಕ್ತಿಯನ್ನು ಅವಸರದಲ್ಲಿ ಬಳಸಿಕೊಂಡು ಕಳಕೊಂಡರೆ ಒಂದೊಮ್ಮೆಗೆ ಅದು ನಿಮ್ಮಲ್ಲಿ ಉಳಿದಿರದೆ ಖಾಲಿಯಾದರೆ ಆಗ ನೀವೂ ಸಾಮಾನ್ಯರಾಗಿ ಹೋಗುತ್ತೀರಿ. ನಿಮಗೆ ಸಂಪ್ರಾಪ್ತವಾಗಿರುವ ದೈವೀಶಕ್ತಿಯನ್ನು ವಿವರ್ಧಿಸಿಕೊಳ್ಳಬೇಕು ಮತ್ತು ಸದ್ವಿನಿಯೋಗ ಮಾಡಬೇಕು. ದುರ್ವಿನಿಯೋಗ ಆಗಲು ಬಿಡಬಾರದು” ಎಂದು ತಿಳಿ ಹೇಳಿದಳು.
ಆಗ ನಾವೆಲ್ಲರೂ ಯೋಚನೆಯಲ್ಲಿ ಮುಳುಗಿ ಹೋದೆವು. “ಅಮ್ಮಾ! ನಿನ್ನಿಂದ ಈ ಮಹತ್ ಸತ್ಯವನ್ನರಿತು ಅನುಗ್ರಹಿತರಾಗಿದ್ದೇವೆ. ಆದರೂ ನಮಗೊಂದು ವಿಚಾರವನ್ನು ತಿಳಿಯುವ ಹೆಬ್ಬಯಕೆಯಿದೆ. ನೀನು ಈ ರೀತಿ ಕುಳಿತು ಚೆಂಡುಗಳ ಜೊತೆ ಅದೇನೊ ಮಾಡುತ್ತಿರುವೆ. ನಮ್ಮ ನೋಟಕ್ಕೆ ಅವುಗಳು ನಿನ್ನ ಬಳಿ ಬರುವಂತೆಯೂ, ನೀನು ಅವುಗಳನ್ನು ತಳ್ಳುವಂತೆಯೂ ಕಾಣಿಸುತ್ತಿದೆ. ಆದರೆ ಈ ಪ್ರಕ್ರಿಯೆಯ ಸತ್ಯ ಏನು ಎಂದು ಅರಿಯದವರಾಗಿದ್ದೇವೆ. ಕೃಪೆದೋರಿ ನೀನು ನಮಗೆ ತಿಳಿಸುವ ಮನ ಮಾಡುವೆಯಾ” ಎಂದು ದೈನ್ಯತೆಯಿಂದ ಪ್ರಾರ್ಥಿಸಿದೆವು. ಆಗ ಅವಳು “ನಿಮಗೆ ಕಾಣಿಸುತ್ತಿರುವ ಶ್ವೇತ ಜಲರಾಶಿ ಪರಮಾತ್ಮನ ಕರುಣೆ ಎಂಬ ಸಾಗರ. ಈ ಚೆಂಡುಗಳೆಲ್ಲಾ ಒಂದೊಂದು ಬ್ರಹ್ಮಾಂಡಗಳು. ಅವುಗಳಿಗೆ ಸ್ವಭಾವ ಸಹಜವಾಗಿ ಆಕರ್ಷಣೆಯಿದೆ. ಸದಾ ಮೂಲದ್ರವ್ಯದೆಡೆ ಧಾವಿಸಿ ಬರುತ್ತಿರುತ್ತವೆ. ಅಂತಹ ಸಮಯದಲ್ಲಿ ಅವುಗಳು ಒಂದಕ್ಕೊಂದು ಘರ್ಷಿಸಿ ಆಘಾತವಾಗದಂತೆ ನಿಯಂತ್ರಣ ಸಾಧಿಸುತ್ತಾ ಅವುಗಳನ್ನು ವ್ಯವಸ್ಥಿತವಾಗಿ ದೂರ ತಳ್ಳುತ್ತಿದ್ದೇನೆ. ನಿಯತವಾದ ಕಾಲದವರೆಗೆ ಅವುಗಳು ಇತ್ತ ಬರ ಬಾರದೆಂಬುವುದು ಭಗವಂತನ ಇಚ್ಚೆ ಅಥವಾ ನಿಯತಿಯ ನಿಯಮ. ಹಾಗಾಗಿ ನಾನು ಈ ಕಾರ್ಯ ನಿರತಳಾಗಿದ್ದು ವ್ಯವಸ್ಥೆ ಮಾಡಿಕೊಂಡಿದ್ದೇನೆ. ಇದು ಅಷ್ಟು ಸುಲಭವಾಗಿ ಅರ್ಥವಾಗುವ ವಿಚಾರವಲ್ಲ. ಬಹಳ ಗಹನವಾದ ವಿಶೇಷ ಪ್ರಕ್ರಿಯೆ. ಪ್ರತಿ ಬ್ರಹ್ಮಾಂಡಗಳೂ ಅವುಗಳ ಕಾಲಾವಧಿ ಆಗುವವರೆಗೆ ಇತ್ತ ಬಾರದಂತೆ ತಳ್ಳತ್ತಿರ ಬೇಕು. ಕಾಲ ಎನ್ನುವುದು ಹೆಬ್ಬಾವಿನಂತೆ ಸುಮ್ಮನಿದೆ ಎಂದು ಭಾಸವಾದರೂ ಕಣ್ಣನ್ನು ಮುಚ್ಚುತ್ತಾ ನೋಡದಂತೆಯೂ, ತೆರೆಯುತ್ತಾ ಎಲ್ಲವನ್ನೂ ನೋಡಿದಂತೆಯೂ ಇದ್ದಲ್ಲಿ ಬಿದ್ದು ಕೊಂಡಿದ್ದರೂ ಬಾಯಿಯನ್ನು ಮಾತ್ರ ತೆರೆದಿಟ್ಟು ಕಾಯುತ್ತಿರುತ್ತದೆ. ಆದರೆ ಸೂಕ್ತ ಕಾಲದ ತನಕ ಕಾದು ಕೂಡಿಬಂದಾಗ ನುಂಗಿಬಿಡುತ್ತದೆ. ಹಾಗೆಯೆ ನಾನು ಸನ್ನಿಹಿತ ಕಾಲದಲ್ಲಿ ಈ ಬ್ರಹ್ಮಾಂಡಗಳನ್ನು ಕಾಲನ ಬಾಯಿಗೆ ತಳ್ಳಿ ಬಿಡುತ್ತೇನೆ. ಹಾಗೆ ಮಾಡಿದ ಬಳಿಕ ಆ ಬ್ರಹ್ಮಾಂಡ ಇಲ್ಲವಾಗುತ್ತದೆ. ಜೊತೆಗೆ ಇಲ್ಲವಾದ ಬ್ರಹ್ಮಾಂಡಗಳು ಮೊಟ್ಟೆಯಂತೆ ಕಾರ್ಯವೆಸಗುತ್ತವೆ. ಅಂದರೆ ಒಂದು ಜಾರಿದ ಕೂಡಲೆ ಮತ್ತೊಂದು ಮೊಟ್ಟೆಯ ಉತ್ಪತ್ತಿ ಅಥವಾ ಸೃಷ್ಟಿಗೆ ಪೂರಕ ಅವಕಾಶವನ್ನು ಮಾಡಿಕೊಡುತ್ತವೆ. ಕಾಲವು ಕಣ್ಮುಚ್ಚಿ ತೆರೆಯುವ ವೇಳೆಗೆ ಅದು ಮೊಟ್ಟೆ ಇಟ್ಟಂತೆ ಇಂತಹ ಮೊಟ್ಟೆಗಳನ್ನು ಹೊರ ಹಾಕುತ್ತಲಿರುತ್ತದೆ. ನನಾನು ಹೇಳಿದ್ದು ಏನು ಎಂದು ಅರ್ಥವಾಗಲಿಲ್ಲವೆ? ಪರಮಾತ್ಮನ ಇಚ್ಚೆಯಂತೆ ಎಷ್ಟೊ ಬ್ರಹ್ಮಾಂಡಗಳು ಇಲ್ಲವಾಗುತ್ತಿರುತ್ತವೆ. ಹೊಸ ಬ್ರಹ್ಮಾಂಡಗಳು ಸೃಷ್ಟಿಯಾಗುತ್ತಾ ಇರುತ್ತವೆ. ಪ್ರತಿಯೊಂದು ಬ್ರಹ್ಮಾಂಡಕ್ಕೂ ಮತ್ತೆ ಬೇರೆ ಬೇರೆಯಾಗಿ ಸೃಷ್ಟಿ, ಸ್ಥಿತಿ, ಲಯಾದಿ ಅಧಿಕಾರಿಗಳೂ ನಿಯೋಜಿತರಾಗುತ್ತಿರುತ್ತಾರೆ. ಆದರೆ ಈ ಬ್ರಹ್ಮಾಂಡಗಳಿಗೆ ಸಾಮ್ಯತೆ ಇರುವುದಿಲ್ಲ. ಒಂದರಂತೆ ಮತ್ತೊಂದು ಇರಲಾರದು. ಕಿಂಚಿತ್ತಾದರೂ ವ್ಯತ್ಯಾಸ ಇದ್ದೇ ಇರುತ್ತದೆ. ನೀವು ಬಕದಾಲ್ಭ್ಯನೂ ಸೇರಿ ಇಪ್ಪತ್ತೈದು ಮಂದಿ ಇಲ್ಲಿ ಬಂದಿದ್ದೀರಿ. ನಿಮ್ಮಲ್ಲಿ ಬಕದಾಲ್ಭ್ಯನು ಏನೂ ಅಲ್ಲ. ಆತನಲ್ಲಿ ಯಾವ ದಿವ್ಯ ಶಕ್ತಿಯೂ ನಿಕ್ಷೇಪವಾಗಿಲ್ಲ. ಅಂದರೆ ಯಾವ ದೈವಾಂಶ ಶಕ್ತಿಯೂ ಆತನಿಗಿಲ್ಲ. ಆತನೋರ್ವ ಕೇವಲ ಅರಿತು ಅನುಭವಿಸುವ ಋಷಿ ಮಾತ್ರನು ಆಗಿದ್ದಾನೆ. ನೀವೆಲ್ಲರೂ ಒಂದೊಂದು ಬ್ರಹ್ಮಾಂಡದ ಬ್ರಹ್ಮರು ಆಗಿರುವಿರಿ. ಆದರೆ ನಿಮಗೆ ಈ ಚೆಂಡುಗಳಲ್ಲಿ ನಿಮ್ಮ ಬ್ರಹ್ಮಾಂಡ ಯಾವುದಾಗಿರಬಹುದು ಎಂದು ಗುರುತಿಸಲೂ ಆಗದು. ಆದರೂ ನಿಮಗೆ ನೀವು ದೊಡ್ಡವರು ಎಂಬ ಭ್ರಮೆಯಿದೆ. ಇಲ್ಲಿ ಲೆಕ್ಕವಿಲ್ಲದಷ್ಟು ಬ್ರಹ್ಮಾಂಡಗಳು ತೇಲಾಡುತ್ತಿರುವುದನ್ನೂ ನೋಡುತ್ತಿರುವಿರಿ. ಆದರೆ ಅವುಗಳು ಎಷ್ಟಿವೆ ಎಂಬ ಲೆಕ್ಕ ಯಾರೂ ಮಾಡಲಾಗದೆ ಹೋಗಿರುವ ಕಾರಣ ಶತಕೋಟಿಗೂ ಅಧಿಕ ಬ್ರಹ್ಮಾಂಡಗಳು ಎಂಬ ಪರಿಕಲ್ಪನೆಯಿದೆ. ಅದರಲ್ಲಿ ಯಾವುದೊ ಇಪ್ಪತ್ತು ಬ್ರಹ್ಮಾಂಡಗಳ ಬ್ರಹ್ಮರು ಮಾತ್ರ ಆಗಿರುವಿರಿ. ಹೇಗೊ ನೀವು ಈ ಬ್ರಹ್ಮಾಂಡ ಜ್ಞಾನ ಅರಿಯಲು ಇಲ್ಲಿಯವರೆಗೆ ಬರುವಂತಾದುದು ನಿಮ್ಮ ಸುಕೃತ ವಿಶೇಷ. ಈಗ ನೀವು ಲೋಕಗಳೆಂದರೆ ಏನು ಎಂದು ಒಮ್ಮೆ ಅವಲೋಕನ ಮಾಡಿ ಬಿಡಿ. ಅತ್ಯಂತ ಕೌತುಕಪ್ರದವೂ ಅರಿಯಲು ಅಸಾಧ್ಯವೂ ಆದ ಸತ್ಯವನ್ನು ಅರಿತುಕೊಳ್ಳಿ. ನಿಮ್ಮಿಂದಾಗಿ, ನಿಮ್ಮ ಜೊತೆ ಬರುವ ಅವಕಾಶ ದೊರೆತ ಕಾರಣದಿಂದಾಗಿ ಅಲಭ್ಯವಾದ ಈ ದಿವ್ಯ ಸತ್ಯ ಅರಿಯುವ ದುರ್ಲಭ ಯೋಗಭಾಗ್ಯ ಈ ಬಕದಾಲ್ಭ್ಯನಿಗೂ ದೊರೆಯಲಿ” ಎಂದು ಹೇಳಿದಳು.
ಆಗ ನಮ್ಮಲ್ಲಿ “ತಾಯಿ ನಮಗೆ ಬ್ರಹ್ಮಾಂಡವನ್ನು ಪೂರ್ಣ ಅರಿತು ಕೊಳ್ಳಲಾಗಲಿಲ್ಲ. ಇನ್ನು ಲೋಕ ಲೋಕಗಳ ಅವಲೋಕನವೇ? ಅದೇನು ತಾಯಿ, ನಮಗೆ ಅರಿಯದು” ಎಂದು ಕೇಳಿಕೊಂಡೆವು.
ಮುಂದುವರಿಯುವುದು…













































































































