24.6 C
Udupi
Saturday, August 15, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 613

ಭರತೇಶ ಶೆಟ್ಟಿ,ಎಕ್ಕಾರು

ಚಂದ್ರಹಾಸನು ನೋಡುತ್ತಿದ್ದಂತೆ ರಥ ಮುಂದುವರಿದು ಬಂತು. ಕುತ್ತಿಗೆ ಎತ್ತರಿಸಿ ನೋಡಿದರೆ ಹಿಂದೆ ಸೇನೆಯಿಲ್ಲ, ಒಂದು ರಥವಷ್ಟೆ ಬರುತ್ತಿದೆ. ಅನತಿ ದೂರದಲ್ಲಿ ರಥ ನಿಂತಿತು. ರಥಿಕನೂ, ಸಾರಥಿಯೂ ಕೆಳಗಿಳಿದು ಬರುತ್ತಿದ್ದಾರೆ. ಹತ್ತಿರ ಹತ್ತಿರ ಬರುತ್ತಿದ್ದಂತೆ ಚಂದ್ರಹಾಸ ಸೂಕ್ಷ್ಮವಾಗಿ ಗುರುತು ಹಿಡಿಯುತ್ತಿದ್ದಾನೆ. ಹಣೆಯಲ್ಲಿ ಕಸ್ತೂರಿ ತಿಲಕ, ನವಿಲು ಗರಿಯುಳ್ಳ ಕಿರೀಟ, ಎದೆಯಲ್ಲಿ ಕೌಸ್ತುಭ ಹಾರ, ಭುಜವನ್ನಾವರಿಸಿ ಇಳಿದಿರುವ ಪೀತಾಂಬರ, ಮೇಘ ವರ್ಣಿಯ ಮುಖದಲ್ಲಿ ಅತಿ ಸುಂದರ ಮುಗುಳು ನಗೆ… ಆಹಾ ಹೌದು ಈತನು ಶ್ರೀಕೃಷ್ಣ, ನನ್ನ ದೇವರು. ಕರ್ಷತಿ ಇತಿ ಕೃಷ್ಣಃ ಎಂಬುದು ಶಾಸ್ತ್ರ ವಚನ. ಯಾವುದು ತುಂಬಾ ಆಕರ್ಷಣೀಯವಾಗಿದ್ದು ನೋಟವನ್ನು ವಿಮುಖವಾಗದಂತೆ ಸೆಳೆಯುತ್ತದೋ ಅದನ್ನು ಕೃಷ್ಣ ಎನ್ನುತ್ತಾರೆ. ಈತನೂ ಹೆಸರಿನ ಅರ್ಥದಂತೆ ಅತುಲ್ಯವಾದ ಆಕರ್ಷಣೆ, ಸೆಳೆತವನ್ನು ಹೊಂದಿದ್ದಾನೆ. ಮಾತ್ರವಲ್ಲ ಕೃಷ್ಣ ವರ್ಣಿಯೂ ಆಗಿದ್ದಾನೆ‌. ಅರೆ! ನನ್ನ ಆರಾಧ್ಯ ಮೂರ್ತಿ ನನ್ನ ಬಳಿಗೆ ಬರುವಾಗ ನಾನೇನು ಮಾಡುತ್ತಿದ್ದೇನೆ? ನಿಂತು ಯೋಚಿಸುವ ಸಮಯವೆ ಇದು? ಎಂದು ಆತಂಕಕ್ಕೊಳಗಾಗಿ ವಯೋ ವೃದ್ಧನಾದರೂ ಎಳೆ ಮಗು ಓಡುವಂತೆ ಶರೀರದ ಅಸಮತೋಲನದ ಬಗ್ಗೆ ಗಮನ ಇಲ್ಲದೆ ಮಗು ಓಡುವಂತೆ ತನ್ನ ದೇವರ ಬಳಿಗೆ ಓಡಿದನು. ನಾಲ್ಕು ಹೆಜ್ಜೆಯಲ್ಲಿ ಕೃಷ್ಣನ ಅತಿ ಸನಿಹಕ್ಕೆ ತಲುಪಿ ಕಣ್ಣರಳಿಸಿ ತನ್ಮಯನಾಗಿ ತದೇಕಚಿತ್ತದಿಂದ ನೋಡಿ, ಉದ್ದಂಡವಾಗಿ ಪಾದಮೂಲಕ್ಕೆ ಶಿರತಾಗಿಸಿ ಸಾಷ್ಟಾಂಗ ನಮಸ್ಕಾರ ಮಾಡಿದನು. ಮತ್ತೆ ಮತ್ತೆ ಕೃಷ್ಣನನ್ನು ನೋಡುತ್ತಾ ಕಣ್ಣಲ್ಲಿ ಕಣ್ಣಿಟ್ಟು ಎವೆಯಿಕ್ಕದೆ ನೋಡುತ್ತಾ ದೇವನೂ ಭಕ್ತನೂ ಅದೇನು ಮೌನ ಸಂಭಾಷಣೆ ನಿರತರಾಗಿದ್ದಾರೋ! ಯಾರಿಗೂ ಅರಿವಾಗುತ್ತಿಲ್ಲ. ಮೌನ ಸಂಭಾಷಣೆಯಲ್ಲಿ ಮನದ ಭಾವಗಳು ಸಂವಹನವಾಗುತ್ತಿವೆ. ಯಾವತ್ತೂ ಯಾವುದಕ್ಕೂ ಆಸೆ ಪಡದ ನಿಷ್ಕಾಮ ಕರ್ಮಿಯಾದ ಚಂದ್ರಹಾಸ ಇಂದು ಮಾತ್ರ ಕಾಮ್ಯ ಕರ್ಮಿಯಾಗಿ ಅದೇನು ಕೇಳುತ್ತಿದ್ದಾನೋ, ದೇವರಲ್ಲಿ ಬೇಡುತ್ತಿದ್ದಾನೋ! ಅವರಿಬ್ಬರಿಗಷ್ಟೆ ವೇದ್ಯ ವಿಚಾರವದು. ಕೆಲ ಹೊತ್ತು ಕಳೆದು ಕೃಷ್ಣ ನೀರವ ಮೌನ ಸಲ್ಲಾಪ ಮುರಿದು ಚಂದ್ರಹಾಸನ ಬಾಹುಗಳನ್ನಾವರಿಸಿ ಎಳೆದು ತನ್ನ ಎದೆಗೊತ್ತಿ ಆಲಿಂಗಿಸಿದನು. ಹೃತ್ಕಮಲದಲ್ಲಿ ಸ್ಥಾನ ಪಡೆದ ಭಕ್ತಾಗ್ರಣಿ ನೀನು ಎಂಬಂತೆ ಪ್ರೀತಿಯಿಂದ ಬಿಗಿದಪ್ಪಿದನು. ಚಂದ್ರಹಾಸನಿಗೆ ಶ್ರೀಕೃಷ್ಣ ಪರಮಾತ್ಮನ ಸ್ಪರ್ಶ ಸುಖದ ಆಲಿಂಗನ ದೊರೆತಾಗ ಹನುಮನಿಗೆ ಶ್ರೀರಾಮ ದೇವರ ಅಪ್ಪುಗೆಯಿಂದಾಗಿದ್ದ ಭಾವುಕ ಸ್ಥಿತಿ, ಜಗತ್ತಿನ ಅತ್ಯುತ್ಕೃಷ್ಟ ಸುಖ ಪ್ರಾಪ್ತವಾಗುತ್ತಿದೆ. ಈಗ ಜಗತ್ತು ಮರೆತು ಹೋಗಿದೆ. ಹೀಗೆಯೆ ಇರಬೇಕು, ಈ ಹಿತಾನುಭವದಿಂದ ಹೊರಬರಲಾರೆ ಎಂಬಂತೆ ಚಂದ್ರಹಾಸ ಶ್ರೀಕೃಷ್ಣನನ್ನು ತನ್ನ ಬಾಹುಬಂಧಿಯಾಗಿಸಿದ್ದಾನೆ. ಈಗಲೂ ಮತ್ತೆ ಶ್ರೀಕೃಷ್ಣ ಮೈದಡವಿ, “ಹೇ ಚಂದ್ರಹಾಸಾ! ಏನಿದು ಭಾವುಕತೆ! ನಾನು ಇಂದು ಬಂದಿದ್ದೊ ನಿನ್ನ ಬಳಿ? ಅನುಕ್ಷಣವೂ ನಿನ್ನ ಜೊತೆಯಲ್ಲಿ ಇರುವವನಲ್ಲವೆ? ನಿನಗೆ ಬುದ್ದಿ ಬರುವುದಕ್ಕೆ ಮುಂಚೆ ನಾನು ನಿನ್ನ ಒಡನಾಡಿಯಾಗಿದ್ದೆ. ಇಂದಿನವರೆಗೂ ನೀನು ನನ್ನನ್ನು ಕ್ಷಣಮಾತ್ರಕ್ಕೂ ಮರೆತು ವ್ಯವಹರಿಸಿದ್ದಿಲ್ಲ. ನಿನ್ನ ಉಸಿರಿನಲ್ಲಾದರೂ ವ್ಯತ್ಯಯವಾಗಿರಬಹುದು, ಆದರೆ ಸ್ಮರಣೆಯಲ್ಲಿ ನೀನು ಎಳ್ಳಿನಿತು ವ್ಯತ್ಯಾಸಕ್ಕೂ ಆಸ್ಪದ ನೀಡಿದವನಲ್ಲ.” ಎಂದು ಭಕ್ತನ ಭಕ್ತಿಯ ಪಾರಮ್ಯವನ್ನು ಸ್ವಯಂ ದೇವರು ತನ್ನ ನಾಲಗೆಯಲ್ಲಿ ಭಕ್ತನ ಸಮ್ಮುಖದಲ್ಲಿ ಹೇಳಿ ಕೊಂಡಾಡಿದನು. ಇದನ್ನು ಕೇಳಿದ ಚಂದ್ರಹಾಸ ತನ್ನನ್ನು ತಾನು ಮರೆತು ಭಾವ ಪರವಶನಾಗಿದ್ದಾನೆ. ಸುಕ್ಕುಗಟ್ಟಿದ ಚರ್ಮದ ಕಣ್ಣುಗಳೊಳಗೆ ಸರೋವರದಂತೆ ಆನಂದಬಾಷ್ಪ ತುಂಬಿತು. ಕಣ್ಣು ಮಂಜಾಗಿ ದೇವರನ್ನು ಕಾಣುವುದಕ್ಕೆ ಅಡ್ಡಿಯಾದಾಗ ರೆಪ್ಪೆಗಳನ್ನು ಮುಚ್ಚಿದ ಪರಿಣಾಮ ಕೆನ್ನೆಗಳ ಮೇಲಿಂದ ಹರಿದಿಳಿದ ಬಾಷ್ಪ ಕೃಷ್ಣನ ಎರಡೂ ಪಾದಗಳ ಮೇಲೆ ಬಿದ್ದು ತೋಯಿಸಿ ಪಾವನವಾದವು.

ಬಳಿಯಲ್ಲಿ ನಿಂತಿದ್ದ ಅರ್ಜುನ ದೇವ ಭಕ್ತರ ಪ್ರೀತಿ ಭಕ್ತಿಯ ಪರಾಕಾಷ್ಟೆ ನೋಡುವುದರಲ್ಲಿ ತಲ್ಲೀನನಾಗಿದ್ದಾನೆ. ಚಂದ್ರಹಾಸ ತನ್ನ ಬಳಿಯಲ್ಲಿದ್ದ ಪಾರ್ಥನತ್ತ ತಿರುಗಿದಾಗ ಅರ್ಜುನ ಪ್ರೀತ್ಯಾದರಗಳಿಂದ ವಂದಿಸಿ ನಿಂತನು. ಅರ್ಜುನನಿಗೆ ಪ್ರತಿ ವಂದಿಸಿದ ಚಂದ್ರಹಾಸನಿಗೆ ವಾಸ್ತವದ ಅರಿವಾಯಿತು. “ಅರೇ! ನಾನೇಷ್ಟು ವಿವಶನಾಗಿ ಹೋದೆ! ನನಗೇನಾಗಿದೆ? ಭಕ್ತನ ಬಳಿಗೆ ತಾನಾಗಿ ಬಂದ ದೇವರನ್ನು ದಾರಿ ಮಧ್ಯದಲ್ಲಿ, ಅದೂ ನಿಲ್ಲಿಸಿ ಎಷ್ಟು ಹೊತ್ತಾಯಿತು! ದೇವರೇ ನಿನ್ನ ಭಕ್ತ ವಯೋವೃದ್ಧನಾಗಿದ್ದಾನೆ. ಕೆಲವೊಮ್ಮೆ ಮೈಮರೆತರೆ ಹೀಗೆ ಆಗಿ ಬಿಡುತ್ತೇನೆ. ಬೆಳಗ್ಗೆ ನಿನ್ನ ಪೂಜಿಸಲು ಕುಳಿತರೆ ಸಂಜೆಯಾದರೂ ನನಗೆ ತಿಳಿಯದು. ಬನ್ನಿ ದೇವರೆ, ಸರ್ವ ಸಿದ್ಧತೆಗಳೊಂದಿಗೆ ಬಂದಿದ್ದೇನೆ. ಭಕ್ತನ ಪ್ರೀತಿಯ ಸ್ವಾಗತ ಸ್ವೀಕರಿಸುತ್ತಾ ಅರಮನೆಗೆ ಬರಬೇಕು. ಬಂದು ಸೇವೆಯನ್ನು ಸ್ವೀಕರಿಸಬೇಕು” ಎಂದು ಬೇಡಿದನು.

“ಚಂದ್ರಹಾಸಾ! ನೀನು ವಯೋವೃದ್ಧನಷ್ಟೆ ಅಲ್ಲ ಜ್ಞಾನವೃದ್ಧನೂ, ಆಚಾರ ವೃದ್ಧನೂ, ಸಂಸ್ಕಾರ ಶ್ರೇಷ್ಟನೂ, ಧರ್ಮಿಷ್ಟನೂ ಆಗಿರುವೆ. ನಿನ್ನ ಬಳಿಗೆ ಅತಿ ಪ್ರೀತಿಯಿಂದ ಬರುತ್ತೇವೆ” ಎಂದು ನುಡಿದ ಕೃಷ್ಣನು ಅರ್ಜುನನ ಜೊತೆ ಭವ್ಯ ಸ್ವಾಗತದೊಂದಿಗೆ ಕುಂತಳದ ಅರಮನೆಗೆ ಬಂದು ರಾಜೋಚಿತ ಸತ್ಕಾರ ಸೇವೆಗಳನ್ನು ಪ್ರೀತಿಯಿಂದ ಸ್ವೀಕರಿಸಿದರು.

ಕೃಷ್ಣಾರ್ಜುನರನ್ನು ತನ್ನ ಅರಮನೆಯಲ್ಲಿ ಇರುವ ದೇವರ ಗುಡಿಗೆ ಕರೆದೊಯ್ದ ಚಂದ್ರಹಾಸ ಅರ್ಜುನನಿಗೆ ಅಲ್ಲಿ ಪ್ರತಿಷ್ಟಾಪಿಸಿದ ಸಾಲಿಗ್ರಾಮವನ್ನು ತೋರಿಸುತ್ತಾ “ಪಾರ್ಥಾ ನೀನು ಎಷ್ಟು ಜನ್ಮ ಜನ್ಮಾಂತರದ ಪುಣ್ಯ ವಿಶೇಷದಿಂದ ದೇವರ ಸಖನಾದೆಯೊ ನಾನರಿಯೆ. ಲೋಕ ಲೋಕಗಳಲ್ಲಿ ನಿನ್ನಷ್ಟು ಭಾಗ್ಯಶಾಲಿ ಇನ್ನೋರ್ವ ಇರುವುದಕ್ಕೇ ಸಾಧ್ಯವಿಲ್ಲ. ಆದರೆ ಸರ್ವರಕ್ಷಕನೂ, ಭಕ್ತವತ್ಸಲನೂ ಆದ ಭಗವಂತ ನನಗೂ ಆತನ ಸೇವೆಯ, ರಕ್ಷಣೆಯ ಮಹಾಭಾಗ್ಯ ಕರುಣಿಸಿದ್ದಾನೆ. ನಾನು ಚಿಕ್ಕವನಿದ್ದಾಗ, ಎಲ್ಲೋ ಆಡುವಾಗ ಈ ಮಣಿರೂಪದ ಸಾಲಿಗ್ರಾಮ ದೊರೆತಿತ್ತು. ಅದನ್ನು ನನ್ನ ಬಾಯಲ್ಲಿ ಇರಿಸಿ ಕೊಂಡಿದ್ದೆ. ಬೆಳೆದು ದೊಡ್ಡವನಾದರೂ ಈ ಸಾಲಿಗ್ರಾಮವನ್ನು ಅರೆ ಕ್ಷಣಕ್ಕೂ ನನ್ನಿಂದ ದೂರ ಇರಿಸಲಾಗುತ್ತಿರಲಿಲ್ಲ. ತಪಸ್ವಿಗಳೂ, ನಮ್ಮ ರಾಜ ಪುರೋಹಿತರೂ ಆಗಿರುವ ಗಾಲವರು ಒಂದು ದಿನ ಈ ಸಾಲಿಗ್ರಾಮವನ್ನು ನೋಡಿ ಇದು ಅಂತಿಂತಹ ಕಲ್ಲು ಅಲ್ಲ. ದುರ್ಲಭವಾದ, ಅತಿಶ್ರೇಷ್ಟವಾದ ವಾಸುದೇವ ಸಾಲಿಗ್ರಾಮ ಎಂದು ಗುರುತಿಸಿ, ಇದರಲ್ಲಿ ಸಾಕ್ಷಾತ್ ಶ್ರೀಮನ್ನಾರಾಯಣನು ನಿವಾಸನಾಗಿದ್ದಾನೆ. ಇದಕ್ಕೆ ನಿತ್ಯ ಪೂಜೆ ಆರಾಧನೆ ಆಗಬೇಕು ಎಂದು ತಿಳಿಸಿದರು. ಅಂದಿನಿಂದ ಈ ಗುಡಿಯಲ್ಲಿ ಪರಮ ಮಂಗಲಮೂರ್ತಿಯ ಪ್ರತಿರೂಪವಾದ ಸಾಲಿಗ್ರಾಮವನ್ನು ಪ್ರತಿಷ್ಠಾಪಿಸಿ ನಿತ್ಯ ಆರಾಧಿಸುತ್ತಾ ಬಂದಿದ್ದೇನೆ” ಎಂದು ಹೇಳಿ ಮನಸಾರೆ ನಮಿಸಿದನು. ಯಾವ ಜನ್ಮದ ಸುಕೃತವೋ, ಪುಣ್ಯ ಫಲವೋ ನನ್ನ ಮನದ ದೇವರನ್ನು ಪ್ರತ್ಯಕ್ಷವಾಗಿ ನನ್ನ ಮನೆಯಲ್ಲಿ ಸೇವಿಸುವ ಭಾಗ್ಯ ನನ್ನದಾಗಿದೆ. ಧನ್ಯನಾದೆ ದೇವಾ ನನಗೆ ಇದಕ್ಕಿಂತ ಮಿಗಿಲಾದುದು ಇನ್ನೇನೂ ಬೇಕಾಗಿಲ್ಲ‌. ನನಗೆ ನೀನು ಬೇಕು ಹೊರತು ಬೇರೇನೂ ಬೇಡ. ಎಂದು ಹೇಳುತ್ತಾ ಮತ್ತೆ ಮತ್ತೆ ಪ್ರಣಾಮ ಸಲ್ಲಿಸಿದನು.

ಆ ಬಳಿಕ ಮಕ್ಕಳಾದ ಮಕರಧ್ವಜ, ಪದ್ಮಾಕ್ಷರನ್ನು ಕರೆದು ಯಾಗಾಶ್ವಗಳೆರಡನ್ನೂ ಸರ್ವಾಲಂಕಾರಗೊಳಿಸಿ ತರುವಂತೆ ಆಜ್ಞಾಪಿಸಿದನು. ಯಥೇಚ್ಚವಾಗಿ ಕಪ್ಪಕಾಣಿಕೆಗಳನ್ನೂ ಬಂಡಿ ಬಂಡಿಗಳಲ್ಲಿ ತುಂಬಿಸಿ ಪುಣ್ಯ ಯಾಗಕ್ಕೆ ಸಮರ್ಪಣೆಯಾಗಿ ನೀಡಿದನು. ಶ್ರೀಕೃಷ್ಣನನ್ನು ಪ್ರಾರ್ಥಿಸಿ ತನ್ನ ಹಿರಿಯ ಮಗನಾದ ಮಕರಧ್ವಜನಿಗೆ ಪಟ್ಟಾಭಿಷೇಕ ಮಾಡಿ ಅನುಗ್ರಹಿಸುವಂತೆ ಬೇಡಿದನು. ಅಂತೆಯೆ ಮಗನಿಗೆ ಅಧಿಕಾರ ಒಪ್ಪಿಸಿ “ಮಗನೇ ನಮಗೆ ದೇವರ ಪ್ರಸಾದ ರೂಪವಾಗಿ ಈ ಅಧಿಕಾರ ಸಾಮ್ರಾಜ್ಯ ಪ್ರಾಪ್ತವಾಗಿದೆ. ನಿನ್ನ ಮಹಾಭಾಗ್ಯ ಎಂಬಂತೆ ದೇವರ ಕೈಯಲ್ಲಿ ನಿನಗೆ ರಾಜ್ಯಾಭಿಷೇಕವೂ ಆಗಿದೆ. ಸದಾಕಾಲ ನ್ಯಾಯ, ಧರ್ಮ, ಸತ್ಯದಿಂದ ಈ ರಾಜ್ಯವಾಳುತ್ತಿರು. ಅನುಕ್ಷಣ ಕೃಷ್ಣ ದೇವರ ಭಜಕನಾಗಿ ಆಡಳಿತ ನಡೆಸು. ದೇವರು ಸದಾ ನಿನ್ನ ರಕ್ಷಕನಾಗಿರಲಿ” ಎಂದು ಆಶೀರ್ವದಿಸಿದನು. ಬಳಿಕ ಮಕ್ಕಳಿಬ್ಬರನ್ನೂ ಕರೆದು “ಮಕ್ಕಳೇ ನಾನು ಕೃಷ್ಣ ದೇವರ ಜೊತೆಯಲ್ಲಿ ಹೋಗುತ್ತೇನೆ. ಅಶ್ವಮೇಧ ದಿಗ್ವಿಜಯ ಮುಗಿದು ಧರ್ಮಾತ್ಮನಾದ ಧರ್ಮರಾಯನ ಯಾಗವನ್ನು ಕಣ್ಣಾರೆ ಕಾಣುವ ಆಸೆಯಿದೆ. ಅದಾದ ನಂತರ ದೇವರ ಅಪ್ಪಣೆ, ಅನುಗ್ರಹ ಪಡೆದು ಅಲ್ಲಿಂದ ತಪೋವನ ಸೇರುತ್ತೇನೆ. ನಿಮಗೆಲ್ಲರಿಗೂ ಶ್ರೀಹರಿಯ ರಕ್ಷೆ ಸದಾ ಇರಲಿ. ಭಗವದನುಗ್ರಹ ಪ್ರಾಪ್ತವಾಗಲಿ” ಎಂದು ಹರಸಿದನು. ಶ್ರೀಕೃಷ್ಣನು ಚಂದ್ರಹಾಸನನ್ನು ತನ್ನ ಜೊತೆಯಾಗಿ ಕರೆದೊಯ್ದನು. ಅರ್ಜುನನೂ ಜೊತೆಯಾಗಿ ಹೊರಟನು. ಯಾಗಾಶ್ವಗಳೂ ಬಂಧ ಮುಕ್ತವಾಗಿ ಮುಂದಕ್ಕೆ ಹೊರಟಿವೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page