
ಬೆಂಗಳೂರು: ಬೆಂಗಳೂರಿನ ಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ತಪಾಸಣೆ ಮುಂದುವರಿದಿದ್ದು, ಮೂರು ದಿನಗಳಲ್ಲಿ 60 ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಕೊಳೆತ ಮಾಂಸ, ಅವಧಿ ಮೀರಿದ ಆಹಾರ, ಕೊಳೆತ ತರಕಾರಿ ಹಾಗೂ ಬಳಸಿದ ಅಡುಗೆ ಎಣ್ಣೆ ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿವೆ.
ತಪಾಸಣೆ ವೇಳೆ 77 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 640 ಕೆ.ಜಿ. ಚಿಕನ್, ಮಟನ್ ಮತ್ತು ಮೀನು, 276 ಕೆ.ಜಿ. ಕೊಳೆತ ತರಕಾರಿ, 45 ಲೀಟರ್ ಅವಧಿ ಮೀರಿದ ಹಾಲು-ಮೊಸರು, 12 ಕೆ.ಜಿ. ಬೇಕರಿ ಉತ್ಪನ್ನ ಹಾಗೂ 67 ಕೆ.ಜಿ. ಅವಧಿ ಮೀರಿದ ಅಥವಾ ತಪ್ಪು ಲೇಬಲ್ ಹೊಂದಿದ್ದ ಆಹಾರವನ್ನು ಜಪ್ತಿ ಮಾಡಲಾಗಿದೆ.
ಇದರ ಜೊತೆಗೆ 49 ಲೀಟರ್ ನಿಯಮಬಾಹಿರವಾಗಿ ಬಳಸಿದ ಅಡುಗೆ ಎಣ್ಣೆಯನ್ನೂ ವಶಪಡಿಸಿಕೊಳ್ಳಲಾಗಿದೆ. ಕೆಲವು ಕಡೆ ಒಂದು ವರ್ಷಕ್ಕೂ ಹೆಚ್ಚು ಹಳೆಯ ಮಾಂಸಾಹಾರ ಉತ್ಪನ್ನಗಳು ಪತ್ತೆಯಾಗಿದ್ದು, ಅವಧಿ ಮೀರಿದ ಆಹಾರವನ್ನು ಮರುಪ್ಯಾಕ್ ಮಾಡಿ ಬಳಸಲು ಸಿದ್ಧಪಡಿಸಿರುವುದು ಬೆಳಕಿಗೆ ಬಂದಿದೆ.
ಯುಬಿ ಸಿಟಿ, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯ ಹೋಟೆಲ್‌ಗಳ ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಹೋಟೆಲ್ ಸ್ಕೈನಲ್ಲಿ 45 ಕೆ.ಜಿ. ಕೊಳೆತ ಕೋಳಿ-ಬೀಫ್, 6 ಕೆ.ಜಿ. ವೆಜಿಟೇಬಲ್ ಕಟ್ಲೆಟ್ ಹಾಗೂ 15 ಲೀಟರ್ ಬಳಸಿದ ಎಣ್ಣೆ ಪತ್ತೆಯಾಗಿದೆ. ರಾಯಲ್ ಚೈನ್ ಹೋಟೆಲ್‌ನಲ್ಲಿ 50 ಕೆ.ಜಿ. ಡಕ್ ಮಾಂಸ ಮತ್ತು 5 ಕೆ.ಜಿ. ಮೀನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಹಲವು ಹೋಟೆಲ್‌ಗಳಲ್ಲಿ ಕಳಪೆ ಆಹಾರ ಪತ್ತೆಯಾಗಿದೆ. ಚೀಸ್ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆ, ಮಶ್ರೂಮ್‌ನಲ್ಲಿ ಫಂಗಸ್ ಹಾಗೂ ಬೇಬಿ ಕಾರ್ನ್‌ನಲ್ಲಿ ಕೀಟಗಳು ಕಂಡುಬಂದಿವೆ. ಸೂಕ್ತವಾಗಿ ಸಂಗ್ರಹಿಸದ ಮಾಂಸಾಹಾರವೂ ಫ್ರೀಜರ್‌ಗಳಲ್ಲಿ ಪತ್ತೆಯಾಗಿದೆ.
ಯುಬಿ ಸಿಟಿಯ ಹೋಟೆಲ್ ಸ್ಕೈನಲ್ಲಿ ಹೆಚ್ಚಿನ ಪ್ರಮಾಣದ ಕಳಪೆ ಆಹಾರ ಸಿಕ್ಕ ಹಿನ್ನೆಲೆಯಲ್ಲಿ ಅಡುಗೆಮನೆಗೆ ಅಧಿಕಾರಿಗಳು ಸೀಲ್ ಹಾಕಿದ್ದಾರೆ.
KFC, McDonald’s, Subwayಗಳಲ್ಲೂ ತಪಾಸಣೆ
ಸ್ಟಾರ್ ಹೋಟೆಲ್‌ಗಳ ಜೊತೆಗೆ KFC, McDonald’s, Subway ಸೇರಿದಂತೆ ಹಲವು ಆಹಾರ ಮಳಿಗೆಗಳು ಹಾಗೂ ಗೋದಾಮುಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಬ್ರಿಗೇಡ್ ರಸ್ತೆಯ McDonald’sನಲ್ಲಿ ಬಳಸಿದ ಅಡುಗೆ ಎಣ್ಣೆ ಶುದ್ಧೀಕರಣಕ್ಕೆ ಮೆಗ್ನೀಸಿಯಂ ಸಲ್ಫೈಟ್ ಬಳಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಪ್ತಿ ಮಾಡಿರುವ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

























































