
ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಗಳ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಘಟಕಗಳಲ್ಲಿ ಪ್ರತಿ ತಿಂಗಳ ಎರಡನೇ ಭಾನುವಾರ ಕಡ್ಡಾಯವಾಗಿ ಜನಸ್ಪಂದನ ಸಭೆ ನಡೆಸುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ಈ ಸಭೆಗಳು ಪೊಲೀಸ್ ಆಯುಕ್ತಾಲಯ, ಜಿಲ್ಲಾ ಪೊಲೀಸ್ ಕಚೇರಿ ಹಾಗೂ ಪೊಲೀಸ್ ಠಾಣೆ ಮಟ್ಟದಲ್ಲಿ ನಡೆಯಲಿವೆ. ಕಾನೂನು ಸುವ್ಯವಸ್ಥೆ, ದೌರ್ಜನ್ಯ ಪ್ರಕರಣಗಳು, ದೂರುಗಳು ಹಾಗೂ ಪೊಲೀಸ್ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಜನರು ನೇರವಾಗಿ ಅಧಿಕಾರಿಗಳ ಮುಂದಿಡಲು ಅವಕಾಶ ಕಲ್ಪಿಸಲಾಗುತ್ತದೆ.
ಸಭೆಯಲ್ಲಿ ಬಂದ ದೂರುಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ನೀಡುವಂತೆ ಹಾಗೂ ಎಲ್ಲ ಪೊಲೀಸ್ ಘಟಕಗಳು ಈ ಸಭೆಯನ್ನು ನಿಯಮಿತವಾಗಿ ನಡೆಸುವಂತೆ ಡಿಜಿ ಮತ್ತು ಐಜಿಪಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.
2015ರ ನವೆಂಬರ್ 17ರ ಸ್ಥಾಯಿ ಆದೇಶದಂತೆ ಇಂತಹ ಸಭೆಗಳನ್ನು ನಡೆಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ಅದನ್ನು ರಾಜ್ಯದಾದ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.











































