28.2 C
Udupi
Sunday, July 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 571

ಭರತೇಶ ಶೆಟ್ಟಿ,ಎಕ್ಕಾರು

ಒಂದಕ್ಕೊಂದು ಅಭಿಮುಖವಾಗಿ ಸಂಧಿಸಿದ ಕುದುರೆಗಳು ಪರಸ್ಪರ ನೋಡುತ್ತಾ ಕೆನೆದವು. ಕಾಲ್ಕೆರೆದು ನೆಲವನ್ನು ಝಾಡಿಸಿ ಜಿಗಿದವು. ಯುದ್ಧಕ್ಕೆ ಸಿದ್ಧವಾಗಿ‌ ಮಲ್ಲ ಯುದ್ಧದ ಭಟರು ಸುತ್ತು ಸುತ್ತು ವೃತ್ತ ಮಂಡಲಾಕೃತಿಯಲ್ಲಿ ತಿರುಗತೊಡಗಿದವು. ಅಷ್ಟಕ್ಕೇ ಸುಮ್ಮನಾಗದೆ ವೇಗವಾಗಿ ಓಡಿ ಒಂದನ್ನೊಂದು ಹಾಯ್ದು ಬಲವಾಗಿ ಘಾತ ಪ್ರತಿಘಾತಗಳನ್ನು ಮಾಡಿಕೊಂಡವು. ಎರಡೂ ಕುದುರೆಗಳ ಹೋರಾಟದ ಬಿರುಸು ಎಷ್ಟಿತ್ತೆಂದರೆ ಅವುಗಳ ಮೈಮೇಲೆ ಅಲಂಕರಿಸಿದ್ದ ವಸನ ಭೂಷಣಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಚಿಮ್ಮಿಹೋದವು. ಇಷ್ಟಾಗುವಾಗ ಕುದುರೆಯ ಕಾವಲು ಭಟರು ಓಡಿ ಬಂದು ನೋಡುತ್ತಾರೆ! ಕುದುರೆಗಳು ಕಾದಾಡುತ್ತಿವೆ. ಎರಡೂ ಕುದುರೆಗಳಿಗೂ ಕೇಳುವವರಿದ್ದಾರೆ. ಅವರನ್ನು ಇವರು – ಇವರನ್ನು ಅವರು ನೋಡಿಕೊಂಡರು. ವಿಷಯ ತಿಳಿಸಬೇಕೆಂದು ಅರಸನಿದ್ದಲ್ಲಿಗೆ ಪರಿಚಾರಕರು ಓಡಿದರು.

ಪಾಂಡವರತ್ತ ಬಂದ ಕುದುರೆಯ ಪರಿಚಾರಕರು ವಿಷಯ ತಿಳಿಸಿದಾಗ, ಶ್ರೀಕೃಷ್ಣ “ನಮ್ಮ ಕುದುರೆಯನ್ನು ಹಾಗೆಯೇ ಬಿಟ್ಟು ಬಿಡಿ. ಎದುರಿನ ಕುದುರೆಯನ್ನೂ ಮುಟ್ಟಬೇಡಿ” ಎಂದು ಆಜ್ಞೆ ಮಾಡಿ ಸುಮ್ಮನುಳಿದನು.

ಇತ್ತ ತಾಮ್ರಧ್ವಜನತ್ತ ಅವನ ಪರಿಚಾರಕರೂ ಬಂದು ವಿಚಾರ ವಿವರಿಸಿ ಹೇಳಿದರು. ತಾಮ್ರಧ್ವಜನಿಗೆ ಪರಮಾಶ್ಚರ್ಯವಾಯಿತು. “ಯಾಗಾಶ್ವವನ್ನು ತುಡುಕಿರುವುದು ಇನ್ನೊಂದು ಯಾಗಾಶ್ವವೇ? ಹಾಗಿದ್ದರೆ ಯಾರ ಅಶ್ವಮೇಧದ ಕುದುರೆಯದು? ಯಾರದ್ದೇ ಆಗಿರಲಿ! ಅದಕ್ಕೀಗ ಏನು ಮಾಡಬೇಕು? ಎದುರಾಗಿ ಬಂದ ಕುದುರೆಯನ್ನು ನಾವು ಕಟ್ಟಬೇಕೋ? ಅಲ್ಲಾ ಅದು ಹಾಗೇ ಇರಲಿ ಎಂದು ನಮ್ಮ ಕುದುರೆಯನ್ನು ಬಿಡಿಸಿ ನಮ್ಮ ಪಾಡಿಗೆ ನಮ್ಮ ಮುಂದಿನ ದಾರಿಯತ್ತ ಹೋಗುವುದೋ? ನಮ್ಮ ಯಾಗದ ಕುದುರೆ ಈಗಷ್ಟೇ ಪೂಜಿಸಿ ಹೊರಡುತ್ತಿದೆಯಷ್ಟೇ ಇನ್ನೂ ಪುರ ತೊರೆದು ಹೊರಬಂದಿಲ್ಲ. ಅಷ್ಟರಲ್ಲಾಗಲೇ ಹೊಸತೊಂದು ಯಾಗಾಶ್ವ ನಮ್ಮ ಪುರವನ್ನು ಪ್ರವೇಶ ಮಾಡಿದೆ. ಏನೇ ಇರಲಿ ಕ್ಷತ್ರಿಯನಾಗಿ ನಮ್ಮ ಪುರ ಪ್ರವೇಶ ಮಾಡಿದ ಯಾಗಾಶ್ವವನ್ನು ಬಂಧಿಸುವುದೇ ನ್ಯಾಯ. ಒಂದು ಯಾಗಾಶ್ವವನ್ನು ಬಿಟ್ಟು ದಿಗ್ವಿಜಯಕ್ಕಾಗಿ ಹೊರಟಿರುವ ಈ ಸಮಯ ಎದುರಾಗಿ ಬಂದ ಕುದುರೆ ಕಟ್ಟಿ ಕಾದಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಇರಲಿ ” ಯಾರಲ್ಲಿ ಆ ಕುದುರೆಯನ್ನು ಬಂಧಿಸಿ ಕಟ್ಟಿ ಹಾಕಿ” ಎಂದು ಆಜ್ಞೆ ಮಾಡಿದನು ತಾಮ್ರ ಧ್ವಜ. ಕುದುರೆ ಬಂಧಿಸಿದ ಸೈನಿಕರು ಹಣೆಯ ಲಿಖಿತವನ್ನು ತಂದು ಯುವರಾಜ ತಾಮ್ರಧ್ವಜನಿಗೆ ಒಪ್ಪಿಸಿದರು. ಓದಿ ನೋಡಿದರೆ ಅದು ಪಾಂಡವರ ಅಶ್ವಮೇಧದ ಕುದುರೆ. ಬೆಂಗಾವಲಿಗನಾಗಿ ಬಂದವನು ಅರ್ಜುನ.

ಈಗ ತಾಮ್ರಧ್ವಜನಿಗೆ ಮತ್ತೆ ಉತ್ತರ ಸಿಗದ ಪ್ರಶ್ನೆ ಎದುರಾಯಿತು. ಕುದುರೆ ಕಟ್ಟಿಯಾಗಿದೆ. ಅಂದರೆ ಯುದ್ಧ ಮಾಡಬೇಕು. ಅರ್ಜುನನೊಡನೆ ಯುದ್ಧ ಮಾಡುವುದಕ್ಕೆ ತಾಮ್ರಧ್ವಜನಿಗೇನೂ ಅಳುಕು ಅಂಜಿಕೆಗಳಿಲ್ಲ. ಆದರೆ ನಮ್ಮ ಉದ್ದೇಶವೇ ಶ್ರೀಕೃಷ್ಣನನ್ನು ಕಾಣುವುದಾಗಿತ್ತು. ಅರ್ಜುನನ ಸಾರಥಿಯಾಗಿ ಶ್ರೀಕೃಷ್ಣನೇ ಇದ್ದಾನೆ ಎಂಬ ಸುದ್ಧಿ ಬಂದಿದೆ. ನಮ್ಮ ದೇವರೇ ಬಂದಿರುವಾಗ ನಮಗೆ ಯುದ್ಧ ಬೇಕಾಗಿಲ್ಲ. ನನ್ನ ತಂದೆ ಮಹಾರಾಜ ಮಯೂರಧ್ವಜ ಯಜ್ಞ ಕಾರ್ಯಕ್ಕೆ ಮನ ಮಾಡಿರುವುದೇ ಕೃಷ್ಣ ದರ್ಶನಕ್ಕಾಗಿ. ಹಾಗಿರುವಾಗ ವೃಥಾ ಯುದ್ಧ ಮಾಡದೇ ಶ್ರೀಕೃಷ್ಣ ಪರಮಾತ್ಮನ ಬಳಿ ಹೋಗಿ ವಂದಿಸಿ ಗೌರವಾದರಗಳೊಂದಿಗೆ ಅರಮನೆಗೆ ಕರೆದೊಯ್ದರೆ ಸಮಸ್ಯೆ ಇತ್ಯರ್ಥವಾದೀತು. ಹಾಗೆ ಮಾಡಿದರೆ ಕುದುರೆ ಕಟ್ಟಿದ ಕ್ಷತ್ರಿಯನಾಗಿ ಒಮ್ಮೆಲೆ ಬಿಟ್ಟುಕೊಟ್ಟರೆ ಕ್ಷಾತ್ರ ಧರ್ಮಕ್ಕೆ ಅಪಚಾರವಾಗುತ್ತದೆ. ಯುದ್ಧ ಮಾಡುವುದೇ ಸರಿ ಅದು ಯೋಧ ನ್ಯಾಯ. ಹಾಗೆಂದು ಯಾರೊಡನೆ ಯುದ್ಧ ನಮ್ಮ ದೇವರ ಪಕ್ಷದೊಡನೆ ಯುದ್ಧವೇ? ದೇವರಿಗೆ ಶರಣಾದರೆ ಏನು ತಪ್ಪಾಗುತ್ತದೆ? ಹೀಗೆ ಎರಡೂ ಸರಿ – ಎರಡೂ ತಪ್ಪು! ಗೊಂದಲಕ್ಕೊಳಗಾದ ತಾಮ್ರಧ್ವಜ ಇಕ್ಕಟ್ಟಿಗೆ ಸಿಲುಕಿದ್ದಾನೆ.

ಒಂದರೆ ಕ್ಷಣ ಶ್ರೀಕೃಷ್ಣನನ್ನು ನಿಂತಲ್ಲೇ ಮನಸಾರೆ ಧ್ಯಾನಿಸಿದ ತಾಮ್ರಧ್ವಜ. “ಹೇಗೂ ಕುದುರೆ ಕಟ್ಟಿ ಆಗಿದೆ. ದೇವರೇ ಕೊಟ್ಟ ಬುದ್ಧಿಯಿಂದ ಕುದುರೆ ಕಟ್ಟಿರುವುದು ಎಂದು ಭಾವಿಸುತ್ತೇನೆ. ಕುದುರೆಯನ್ನು ಕಟ್ಟಿ ಆದ ಮೇಲೆ ಯೋಚಿಸುವುದು ಕ್ಷತ್ರಿಯರಿಗೆ ಭೂಷಣವಲ್ಲ. ಯುದ್ಧಕ್ಕೆ ಸಕಲ ಸಿದ್ಧತೆ ಮಾಡಿ ಸೈನ್ಯವನ್ನು ಸಜ್ಜುಗೊಳಿಸುತ್ತೇನೆ. ಶ್ರೀಕೃಷ್ಣನಿಗೆ ಇದೇ ಪ್ರಿಯವಾಗಿರಬಹುದು. ದೈವೇಚ್ಚೆ ಏನಿದೆಯೇ ಅದೇ ಆಗಲಿ” ಎಂದು ಧೃಡ ನಿರ್ಧಾರಕ್ಕೆ ಬಂದು ಸೇನಾಪತಿಗೆ ಸಿದ್ಧತೆಗೆ ಆಜ್ಞೆ ಮಾಡಿದನು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page