
ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಯುವಜನತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ “ವಿಕಾಸ ಉದ್ಯೋಗ ಸೇತು” ನೇರ ಉದ್ಯೋಗ ಸಂದರ್ಶನ ಕಾರ್ಯಕ್ರಮವು ಜುಲೈ 09, 2026 (ಗುರುವಾರ) ರಂದು ಕಾರ್ಕಳ ವಿಕಾಸ ಜನಸೇವಾ ಕಛೇರಿಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ ಪೂರ್ವಭಾವಿ ಮಾಹಿತಿ ಕಾರ್ಯಗಾರವನ್ನು ನಾಳೆ ಜುಲೈ 06, 2026 (ಸೋಮವಾರ) ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಆಯೋಜಿಸಲಾಗಿದೆ.
ಈ ಕಾರ್ಯಗಾರದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಆತ್ಮವಿಶ್ವಾಸದಿಂದ ಹೇಗೆ ಎದುರಿಸಬೇಕು, ಯಾವ ಕಂಪೆನಿಗಳು ಭಾಗವಹಿಸುತ್ತದೆ, ರೆಸ್ಯೂಮ್ ಸಿದ್ಧಪಡಿಸುವ ವಿಧಾನ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಉದ್ಯೋಗದಾತರು ಗಮನಿಸುವ ಪ್ರಮುಖ ಅಂಶಗಳು ಹಾಗೂ ಉದ್ಯೋಗ ಸಂದರ್ಶನದ ವೇಳೆ ಪಾಲಿಸಬೇಕಾದ ಶಿಷ್ಟಾಚಾರ ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ಪರಿಣಿತರು ನೀಡಲಿದ್ದಾರೆ.
ಜುಲೈ 09ರಂದು ನಡೆಯಲಿರುವ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಬಹುರಾಷ್ಟ್ರೀಯ (MNC) ಹಾಗೂ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯುವ ಉತ್ತಮ ಅವಕಾಶ ಲಭ್ಯವಿದೆ. ಆದ್ದರಿಂದ, ನೇರ ಸಂದರ್ಶನದಲ್ಲಿ ಭಾಗವಹಿಸಲು ಈಗಾಗಲೇ ನೋಂದಾಯಿಸಿಕೊಂಡಿರುವ ಎಲ್ಲಾ ಉದ್ಯೋಗಾಕಾಂಕ್ಷಿಗಳು ಜುಲೈ 6ರಂದು ನಡೆಯುವ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ, ಸಂದರ್ಶನಕ್ಕೆ ಅಗತ್ಯವಾದ ಪೂರ್ವತಯಾರಿಯನ್ನು ಮಾಡಿಕೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕರಾದ ವಿ. ಸುನಿಲ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.








































