
ಬೆಂಗಳೂರು: ಗ್ಯಾರಂಟಿ ಯೋಜನೆಗಳಲ್ಲಿ ಅಕ್ರಮ ತಡೆದು ನಿಜವಾದ ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ–ಮನೆ ಪರಿಶೀಲನೆ ಕಾರ್ಯವನ್ನು ಜುಲೈ 1ರಿಂದ ರಾಜ್ಯದ ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಆರಂಭಿಸಲಿದ್ದಾರೆ.
ಪರಿಶೀಲನೆ ವೇಳೆ ಮೊಬೈಲ್ ಆಪ್ ಮತ್ತು ಘೋಷಣಾ ಪತ್ರದ ಮೂಲಕ ಅರ್ಜಿ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಫಲಾನುಭವಿಗಳು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಫೋಟೋ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಹಾಗೂ ಅನ್ವಯಿಸುವಲ್ಲಿ ಬಾಡಿಗೆ ಒಪ್ಪಂದದ ದಾಖಲೆಗಳನ್ನು ತೋರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.
ಸ್ಥಳದಲ್ಲೇ ಮೀಟರ್ ರೀಡರ್‌ಗಳು ದಾಖಲೆ ಮತ್ತು ಮಾಹಿತಿಯನ್ನು ಪರಿಶೀಲಿಸಲಿದ್ದು, ಗ್ರಾಹಕರು ಹಾಗೂ ಫಲಾನುಭವಿಗಳು ಈ ಪ್ರಕ್ರಿಯೆಗೆ ಸಹಕರಿಸುವಂತೆ ಇಂಧನ ಇಲಾಖೆ ಮನವಿ ಮಾಡಿದೆ.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಯ ಗೃಹ ಬಳಕೆಗೆ ತಿಂಗಳಿಗೆ ಗರಿಷ್ಠ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಸೌಲಭ್ಯ ಕೇವಲ ಗೃಹ ಬಳಕೆದಾರರಿಗೆ ಮಾತ್ರ ಅನ್ವಯವಾಗಿದ್ದು, ವಾಣಿಜ್ಯ ಬಳಕೆಗೆ ಅನ್ವಯಿಸುವುದಿಲ್ಲ. ಬಾಡಿಗೆದಾರರೂ ಅರ್ಹರಾಗಿದ್ದು, ಒಂದು ಆಧಾರ್ ಸಂಖ್ಯೆಗೆ ಒಂದೇ ಮೀಟರ್‌ಗೆ ಮಾತ್ರ ಯೋಜನೆಯ ಲಾಭ ದೊರೆಯಲಿದೆ.





















































































