
1928ರ ಸೆಪ್ಟೆಂಬರ್ 23ರಂದು ಉಡುಪಿಯಲ್ಲಿ ಸ್ಥಾಪನೆಯಾಗಿ 2028ರಲ್ಲಿ ಶತಮಾನೋತ್ಸವ ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಯುಎಇ ಮೂಲದ ಹಿರಿಯ ಸಮಾಜಸೇವಕ ಹಾಗೂ ಉದ್ಯಮಿ ಸರ್ವೋತ್ತಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಪರೀಕ ಗ್ರಾಮದವರಾದ ಅವರು ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಯುಎಇನಲ್ಲಿ ಕನ್ನಡ ಹಾಗೂ ತುಳು ಭಾಷೆ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸೇವೆ ಸಲ್ಲಿಸಿದ್ದಾರೆ.
ಅಬುಧಾಬಿ ಕರ್ನಾಟಕ ಸಂಘ, ಯುಎಇ ಬಂಟ್ಸ್ ಹಾಗೂ ಯುಎಇ ತುಳು ಕೂಟ ಸೇರಿದಂತೆ ಹಲವು ಸಂಘಟನೆಗಳ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರವಹಿಸಿರುವ ಸರ್ವೋತ್ತಮ ಶೆಟ್ಟಿ, ಅನಿವಾಸಿ ತುಳುವರನ್ನು ಜಾಗತಿಕ ಮಟ್ಟದಲ್ಲಿ ಒಗ್ಗೂಡಿಸುವ ಕೆಲಸದಲ್ಲಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದ ವಿಶ್ವ ತುಳುವರೆ ಆಯನೋ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಜೊತೆಗೆ 2018ರ ದುಬೈ ವಿಶ್ವ ತುಳು ಸಮ್ಮೇಳನದಲ್ಲೂ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದರು.
ತುಳುವರ್ಲ್ಡ್ ಫೌಂಡೇಶನ್‌ನ ನಿಕಟ ಪೂರ್ವ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಅವರು, ತುಳುವ ಮಹಾಸಭೆಯ ಪುನಶ್ಚೇತನ ಮತ್ತು ವಿಸ್ತರಣೆಗೆ ಕೊಡುಗೆ ನೀಡಿದ್ದಾರೆ. ವಿದೇಶದಲ್ಲಿ ಕನ್ನಡ ಮತ್ತು ತುಳು ಭಾಷೆಯ ಸೇವೆಗೆ ಕರ್ನಾಟಕ ಸರ್ಕಾರವು ಅವರಿಗೆ 1998ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (ಹೊರನಾಡ ಕನ್ನಡಿಗ) ನೀಡಿ ಗೌರವಿಸಿತ್ತು. ಅಲ್ಲದೆ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೂ ಅವರು ಪಾತ್ರರಾಗಿದ್ದಾರೆ.
1928ರಲ್ಲಿ ಎಸ್.ಯು ಪಣಿಯಾಡಿಯವರ ನೇತೃತ್ವದಲ್ಲಿ ಆರಂಭವಾದ ತುಳುವ ಮಹಾಸಭೆ, ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ದೈವಾರಾಧನೆ ಹಾಗೂ ಜಾನಪದ ಪರಂಪರೆಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶತಮಾನೋತ್ಸವದ ಅಂಗವಾಗಿ ತುಳುವರ್ಲ್ಡ್ ಫೌಂಡೇಶನ್‌ನ ಸಹಕಾರದೊಂದಿಗೆ ಸಂಸ್ಥೆಯನ್ನು ಪುನಶ್ಚೇತನಗೊಳಿಸಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಕಾರ್ಯ ನಡೆಯುತ್ತಿದೆ.
ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ತುಳು ಭಾಷೆಗೆ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸ್ಥಾನಮಾನ, ಕರ್ನಾಟಕ ಹಾಗೂ ಕೇರಳದಲ್ಲಿ ಅಧಿಕೃತ ಭಾಷೆಯ ಮಾನ್ಯತೆ, ತುಳು ಸಂಸ್ಕೃತಿ ಸಂರಕ್ಷಣೆ, ಯುವಜನರ ಕೌಶಲ್ಯಾಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ತುಳುವರ ಐಕ್ಯತೆ ಬಲಪಡಿಸುವ ಗುರಿಗಳು ಸೇರಿವೆ.
2028ರ ಶತಮಾನೋತ್ಸವವನ್ನು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವಿಜೃಂಭಣೆಯಿಂದ ಆಚರಿಸಲು ಯೋಜನೆ ರೂಪಿಸಲಾಗಿದ್ದು, ಭಾಷೆ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಪ್ರಕಟಣೆಯಲ್ಲಿ ತಿಳಿಸಿದೆ.








































