
ಬೆಂಗಳೂರು: ಶಾಶ್ವತ ನಿವಾಸ ಪ್ರಮಾಣಪತ್ರ (PRC)ಗಳನ್ನು ಸುಲಭ ಹಾಗೂ ನಿಗದಿತ ಅವಧಿಯಲ್ಲಿ ವಿತರಿಸಲು ರಾಜ್ಯ ಸರ್ಕಾರ ಹೊಸ ಕಾರ್ಯಾಚರಣಾ ವ್ಯವಸ್ಥೆ ಜಾರಿಗೆ ತಂದಿದೆ. ಈ ಸಂಬಂಧ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಆದೇಶ ಹೊರಡಿಸಿದ್ದಾರೆ.
ಹೊಸ ಮಾರ್ಗಸೂಚಿಯಂತೆ ಅರ್ಹರಿಗೆ ನಿವಾಸ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಇತರೆ ಸರ್ಕಾರಿ ಪ್ರಮಾಣಪತ್ರ ಹಾಗೂ ನಾಗರಿಕ ಸೇವೆಗಳನ್ನೂ ಈಗಿನ ನಿಯಮಾವಳಿಗಳಂತೆ ಮುಂದುವರಿಸಲಾಗುತ್ತದೆ.
ಪ್ರವೇಶ, ಉದ್ಯೋಗ ನೇಮಕಾತಿ, ವಿದ್ಯಾರ್ಥಿವೇತನ, ಕಲ್ಯಾಣ ಯೋಜನೆಗಳು ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳಿಗೆ PRC ಪ್ರಮುಖ ದಾಖಲೆ ಆಗಿರುವುದರಿಂದ, ಈ ಸೇವೆಯನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ–2011ರ ಅಡಿಯಲ್ಲಿ ತರಲು ಸರ್ಕಾರ ನಿರ್ಧರಿಸಿದೆ.
ಅರ್ಜಿದಾರರ ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂಟರ್ನೆಟ್ ಮತ್ತು ಕಂಪ್ಯೂಟರ್ ಸೌಲಭ್ಯ ಹೊಂದಿದ ಸಹಾಯ ಕೌಂಟರ್‌ಗಳನ್ನು ಸ್ಥಾಪಿಸಲಾಗುತ್ತದೆ. ಸೇವಾ ಸಿಂಧು, ಅಟಲ್ ಜನಸ್ನೇಹಿ ಕೇಂದ್ರ ಅಥವಾ ಸರ್ಕಾರ ಸೂಚಿಸುವ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಜಿಲ್ಲಾ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಆದೇಶ ಹೊರಡಿಸಿದ ಏಳು ದಿನಗಳೊಳಗೆ ಈ ವ್ಯವಸ್ಥೆ ಆರಂಭಿಸಬೇಕಿದ್ದು, ಸರ್ಕಾರಿ ದತ್ತಾಂಶ ಬಳಸಿ ದಾಖಲೆಗಳ ಅವಶ್ಯಕತೆಯನ್ನು ಕಡಿಮೆ ಮಾಡುವ ಕ್ರಮ ಕೈಗೊಳ್ಳಲಾಗಿದೆ.
ಯೋಜನೆ ಅನುಷ್ಠಾನದ ಮೇಲ್ವಿಚಾರಣೆಯನ್ನು ಕಂದಾಯ ಇಲಾಖೆ ನಡೆಸಲಿದ್ದು, ಅಗತ್ಯ SOP, ತಾಂತ್ರಿಕ ಮಾರ್ಗಸೂಚಿ ಹಾಗೂ ಅರ್ಜಿ ಪ್ರಕ್ರಿಯೆಗಳನ್ನೂ ಇಲಾಖೆ ಪ್ರಕಟಿಸಲಿದೆ. ಈ ಕ್ರಮ ಜನರಿಗೆ ವೇಗವಾದ, ಪಾರದರ್ಶಕ ಹಾಗೂ ಸುಲಭ ಸೇವೆ ಒದಗಿಸುವತ್ತ ಮಹತ್ವದ ಹೆಜ್ಜೆಯಾಗಿದೆ.








































