
ಬೆಂಗಳೂರು: ಪತಿಗಿಂತ ಪತ್ನಿಯ ಆದಾಯ ಹೆಚ್ಚಿದ್ದರೆ ಕಡ್ಡಾಯವಾಗಿ ಜೀವನಾಂಶ ನೀಡಬೇಕೆಂಬ ನಿಯಮ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಚ್ಛೇದನ ಪ್ರಕರಣದಲ್ಲಿ ಪತ್ನಿಗೆ ಜೀವನಾಂಶ ನೀಡುವಂತೆ ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪತ್ನಿಯ ಆದಾಯ ಪತಿಗಿಂತ ಹೆಚ್ಚಿರುವ ಸಂದರ್ಭಗಳಲ್ಲಿ ತಕ್ಷಣ ಜೀವನಾಂಶ ಮಂಜೂರು ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದೆ.
ಪ್ರಕರಣದಲ್ಲಿ ಪತಿಗೆ ಮಾಸಿಕ ₹60,646 ಹಾಗೂ ಪತ್ನಿಗೆ ₹1 ಲಕ್ಷ ಆದಾಯ ಇದ್ದುದನ್ನು ನ್ಯಾಯಾಲಯ ಪರಿಗಣಿಸಿತು. ಜೊತೆಗೆ ಪತ್ನಿಗೆ ಮಕ್ಕಳು ಅಥವಾ ಇತರೆ ಅವಲಂಬಿತ ಹೊಣೆಗಾರಿಕೆಗಳಿಲ್ಲ ಎಂಬುದನ್ನೂ ಗಮನಕ್ಕೆ ತೆಗೆದುಕೊಂಡಿತು.
ಈ ಹಿನ್ನೆಲೆಯಲ್ಲಿ ಜೀವನಾಂಶ ನೀಡುವಂತೆ ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು, ಪತಿಯ ಆದಾಯಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದರೆ ಕೇವಲ ಪತಿಯೇ ಪತ್ನಿಯನ್ನು ಪೋಷಿಸಬೇಕು ಎಂಬ ಕಾರಣಕ್ಕೆ ಜೀವನಾಂಶ ಮಂಜೂರು ಮಾಡುವುದನ್ನು ನ್ಯಾಯಾಲಯಗಳು ತಪ್ಪಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.


































