
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಪರಿಣಾಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತೆ ಹೆಚ್ಚಳ ಕಂಡಿವೆ. ಶನಿವಾರದಿಂದ ಪೆಟ್ರೋಲ್ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ಲೀಟರ್‌ಗೆ 91 ಪೈಸೆ ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 107.14 ರೂ. ಹಾಗೂ ಡೀಸೆಲ್ ದರ 95.04 ರೂ. ತಲುಪಿದೆ. ಮೇ ತಿಂಗಳಲ್ಲೇ ಇದು ಮೂರನೇ ಬಾರಿ ಇಂಧನ ದರ ಏರಿಕೆಯಾಗಿದೆ. ಈ ವಾರದ ಆರಂಭದಲ್ಲಿ 90 ಪೈಸೆ ಹೆಚ್ಚಳವಾಗಿದ್ದರೆ, ಅದಕ್ಕೂ ಮುನ್ನ ತೈಲ ಕಂಪನಿಗಳು ಪ್ರತಿ ಲೀಟರ್‌ಗೆ ಸುಮಾರು 3 ರೂ. ಹೆಚ್ಚಿಸಿತ್ತು.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 99.51 ರೂ. ಹಾಗೂ ಡೀಸೆಲ್ ದರ 92.49 ರೂ.ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 110.57 ರೂ., ಡೀಸೆಲ್ 96.04 ರೂ., ಮುಂಬೈನಲ್ಲಿ ಪೆಟ್ರೋಲ್ 107.56 ರೂ., ಡೀಸೆಲ್ 94.05 ರೂ. ಹಾಗೂ ಚೆನ್ನೈನಲ್ಲಿ ಪೆಟ್ರೋಲ್ 104.54 ರೂ., ಡೀಸೆಲ್ 96.16 ರೂ. ಆಗಿದೆ.
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತು ಯುಎಸ್-ಇರಾನ್ ಮಾತುಕತೆಗಳ ಅನಿಶ್ಚಿತತೆಯಿಂದ ಕಚ್ಚಾ ತೈಲ ಬೆಲೆಗಳು ಏರಿಕೆಯಾಗುತ್ತಿವೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 104 ಡಾಲರ್ ದಾಟಿದ್ದು, ಕೆಲವೊಮ್ಮೆ 111 ಡಾಲರ್‌ವರೆಗೂ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಬೆಲೆ ಏರಿಕೆಯಾಗಿದ್ದರೂ ದೇಶೀಯ ದರಗಳನ್ನು ಹಲವು ತಿಂಗಳು ಸ್ಥಿರವಾಗಿಟ್ಟಿದ್ದ ತೈಲ ಕಂಪನಿಗಳು ಪ್ರತಿ ತಿಂಗಳು ಸುಮಾರು 1,000 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ನಷ್ಟದ ಹೊರೆಯನ್ನು ಕಡಿಮೆ ಮಾಡಲು ದರ ಪರಿಷ್ಕರಣೆ ಮಾಡಲಾಗಿದೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಜಾಗತಿಕ ಸವಾಲುಗಳ ನಡುವೆಯೂ ದೇಶದಲ್ಲಿ ಇಂಧನ ಪೂರೈಕೆ ಸಮರ್ಪಕವಾಗಿದೆ ಎಂದು ತಿಳಿಸಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಸಣ್ಣ ಪ್ರಮಾಣದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.



























